ಉಡುಪಿ: ನಟ ಪ್ರಕಾಶ್ ರಾಜ್ ಕರಾವಳಿ ಭಾಗದಲ್ಲಿ ನಾಟಕ ಕಾರ್ಯಕ್ರಮಗಳ ಮೂಲಕ ಕಲಾವಿದರನ್ನು ಒಗ್ಗೂಡಿಸಿ ಅವರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದರು.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ಕಾಂಗ್ರೆಸ್ ವಿರುದ್ಧ ಉಡುಪಿಯ ಜಟ್ಕಾ ಸ್ಟ್ಯಾಂಡ್ ಬಳಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಕಾಶ್ ರಾಜ್ ಅವರು ಕಲಾವಿದರಿಗೆ ಮತಾಂತರ ಸೇರಿದಂತೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. “ತುದೆಗ್ ಜಾಸ್ತಿ ಅಂಡಲಾ ಕಡಲಗ್ ಜಾಸ್ತಿ ಆಪುಜಿ (ನದಿಗೆ ಜಾಸ್ತಿ ಆದರೂ ಕಡಲಿಗೆ ಜಾಸ್ತಿ ಆಗುವುದಿಲ್ಲ) ಎಂಬ ಗಾದೆಯ ಅರ್ಥವನ್ನು ತಿಳಿದುಕೊಳ್ಳಬೇಕು. ಕರಾವಳಿಗೆ ಬಂದು ಅಧಿಕ ಪ್ರಸಂಗ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಮೀನುಗಳಿಗೆ ಆಹಾರ ಆಗಬಹುದು ಎಂದು ಎಚ್ಚರಿಕೆ ನೀಡಿದರು.

