ಉಡುಪಿ: ಲೋಕಾನುಗ್ರಹೀ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿವಸಲ್ಲಮರ 1500ನೇ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲೆಯ ಸುನ್ನೀ ಸಂಘಟನೆಗಳ ಒಕ್ಕೂಟವಾದ ಜಿಲ್ಲಾ ಸುನ್ನೀ ಕೋ-ಓಡಿನೇಶನ್ ಸಮಿತಿ ವತಿಯಿಂದ ಬೃಹತ್ ಮೀಲಾದ್ ಜಾಥಾ ಸೆ.13 ಶನಿವಾರದಂದು ಉಡುಪಿ ನಗರದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಸುನ್ನೀ ಕೋ-ಓಡಿನೇಶನ್ ಸಮಿತಿ ಅಧ್ಯಕ್ಷ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರವಾದಿ ಮುಹಮ್ಮದರ 1500ನೇ ಮೀಲಾದ್ ಆಚರಣೆ ಪ್ರಯುಕ್ತ “ಸಾರ್ವತ್ರಿಕ ದರ್ಶನದ ಪ್ರವಾದಿ” ಎಂಬ ಶೀರ್ಷಿಕೆಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.13ರಂದು ಮಧ್ಯಾಹ್ನ 2.30ಕ್ಕೆ ಉಡುಪಿ ಅಂಜುಮನ್ ಮಸೀದಿಯಲ್ಲಿ ಮೌಲಿದ್ ಪಾರಾಯಣ ಹಾಗೂ ಮಧ್ಯಾಹ್ನ 3.30ಕ್ಕೆ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಅಂಜುಮನ್ ಮಸೀದಿಯಿಂದ ಹೊರಟು, ಸರ್ವಿಸ್ ಬಸ್ ನಿಲ್ದಾಣ, ಅಲಂಕಾರ್, ಕೋರ್ಟ್ ಮಾರ್ಗವಾಗಿ ಅಜ್ಜರಕಾಡು ಹುತಾತ್ಮ ಭವನ ಬಳಿ ಸಮಾಪ್ತಿಗೊಳ್ಳಲಿದೆ ಎಂದರು.

ಸಮಾರೋಪ ಕಾರ್ಯಕ್ರಮದಲ್ಲಿ ಮೌಲಾನಾ ಮುತ್ತಿ ಬದ್ರುದ್ದೀನ್ ಮಿಸ್ಟಾಹೀ ಕಾರ್ಕಳ, ಅಹ್ಮದ್ ಶರೀಫ್‌ ಸಅದಿ ಅಲ್ ಕಾಮಿಲ್ ಕಿಲ್ಲೂರು ಸಂದೇಶ ಭಾಷಣ ಮಾಡಲಿದ್ದಾರೆ. ವಿವಿಧ ಅತ್ಯಾಕರ್ಷಕ ದಫ್, ಸ್ಕೌಟ್ ಗಳೊಂದಿಗೆ ನಡೆಯುವ ಜಾಥಾದಲ್ಲಿ ಜಿಲ್ಲೆಯ ಉನ್ನತ ಉಲಮಾ, ನಾದಾತುಗಳು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.