ಉಡುಪಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ಹತ್ತಿಕೊಂಡು ಫ್ರಿಡ್ಜ್, ವಾಷಿಂಗ್ ಮೆಷಿನ್ ಸಹಿತ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋದ ಘಟನೆ ಕಟಪಾಡಿಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಚ್ಚಿಕಾಡು ಎಂಬಲ್ಲಿ ಶನಿವಾರ ಸಂಭವಿಸಿದೆ.
ಕುಚ್ಚಿಕಾಡಿನ ಸಂಪ ಆರ್. ಸುವರ್ಣ ಎಂಬವರ ಮನೆಯಲ್ಲಿ ಅಗ್ನಿಅವಘಡ ಉಂಟಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ.
ಬಳಿಕ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿ ಬಂದ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಕಿ ಅವಘಡದಿಂದ ಮನೆ ಹಾಗೂ ವಸ್ತುಗಳಿಗೆ ಹಾನಿ ಉಂಟಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

