ಉಡುಪಿ: ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಉಡುಪಿ ನಗರ ಠಾಣೆ ಪೊಲೀಸರು, ₹23.56 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು, ವಿದೇಶಿ ಕರೆನ್ಸಿ ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೆರಂಪಳ್ಳಿ ಸಂತೋಷನಗರದ ಅರುಣ್ ಎಸ್.ವಿ. (43) ಹಾಗೂ ತೆಂಕನಿಡಿಯೂರು ಗ್ರಾಮದ ಕೌಶೀಕ್ (19) ಬಂಧಿತರು. ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದುಬೈಯಲ್ಲಿದ್ದ ಅವರು ಊರಿಗೆ ಬಂದ ಬಳಿಕ, ಆಗಸ್ಟ್ 8ರಂದು ಸಂಬಂಧಿಕರ ಮನೆಗೆ ತೆರಳಿದ್ದರು. ಆಗಸ್ಟ್ 11ರಂದು ಮನೆಗೆ ಮರಳಿದಾಗ ಟೆರೇಸ್‌ನ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು ಕಪಾಟಿನ ಡ್ರಾವರ್‌ನಲ್ಲಿದ್ದ 10,000 ಎಇಡಿ (ದುಬೈ ದಿರ್ಹಮ್) ಹಾಗೂ ₹14 ಸಾವಿರ ನಗದು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಗಾಗಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಕಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆಗಸ್ಟ್ 23ರಂದು ಖಚಿತ ಮಾಹಿತಿ ಮೇರೆಗೆ ಪೆರಂಪಳ್ಳಿ ಸಂತೋಷನಗರದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಸುಮಾರು ₹2 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ, 1.360 ಕೆ.ಜಿ. ಬೆಳ್ಳಿ ಆಭರಣ, 1.45 ಗ್ರಾಂ ಚಿನ್ನದ ನಾಣ್ಯಗಳು, 88.400 ಗ್ರಾಂ ಚಿನ್ನ (ಅಂದಾಜು ₹13.26 ಲಕ್ಷ), ₹33 ಸಾವಿರ ನಗದು, ₹13 ಸಾವಿರ ಮೌಲ್ಯದ ಎರಡು ಮೊಬೈಲ್‌ಗಳು, ₹4 ಲಕ್ಷ ಮೌಲ್ಯದ ಆಟೋರಿಕ್ಷಾ, ₹30 ಸಾವಿರ ಮೌಲ್ಯದ ವಿದೇಶಿ ಕೈಗಡಿಯಾರ ಹಾಗೂ ₹45 ಸಾವಿರ ಮೌಲ್ಯದ ಕಳವು ಮಾಡಿದ್ದ ಪಲ್ಸರ್ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಐದು ಪ್ರಕರಣಗಳಿಗೆ ಸಂಬಂಧ: ಆರೋಪಿಗಳು ಉಡುಪಿ ನಗರ ಹಾಗೂ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಕೊಡಂಕೂರು ಗ್ರಾಮದ ಶಶಿರೇಖಾ ಅವರ ಮನೆ, ಭಗವತಿ ಲೇಔಟ್‌ನ ಸನಂ ಅವರ ಮನೆ, ಕೆಳಾರ್ಕಳಬೆಟ್ಟು ಪ್ರದೇಶದ ತೃಪ್ತಿ ಅವಿನಾಶ್ ಹಾಗೂ ರವಿ ಉಪಾಧ್ಯ ಅವರ ಮನೆಗಳಲ್ಲಿ ಕಳ್ಳತನ ಮಾಡಿರುವ ಆರೋಪವಿದೆ. ಅಲ್ಲದೆ, ನೇಜಾರು ಮಸೀದಿ ಸಮೀಪದ ಗ್ಯಾರೇಜ್‌ನಿಂದ ಪಲ್ಸರ್ ಬೈಕ್ ಕಳವು ಮಾಡಿರುವ ಪ್ರಕರಣವೂ ಆರೋಪಿಗಳ ವಿರುದ್ಧ ದಾಖಲಾಗಿದೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ಕಳವು ಮಾಡುತ್ತಿದ್ದು, ಬೈಕ್‌ನಲ್ಲಿ ತೆರಳಿ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಅರುಣ್ ಮಣಿಪಾಲ ಠಾಣೆಯ 2016ರ ಪೋಕ್ಸೋ ಪ್ರಕರಣದಲ್ಲಿ ಒಂಬತ್ತು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿ 2025ರ ಜುಲೈನಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ. ಪಿಎಸ್‌ಐ ಪ್ರಕಾಶ್, ಪ್ರಸನ್ನ.ಸಿ., ಜೀವನ್‌ಕುಮಾರ್, ಕೃಷ್ಣ ದೇವಾಡಿಗ, ಆನಂದ ಗಾಣಿಗ, ಆನಂದ ಎಸ್., ಓಬಳೇಶ್, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ್, ಹೇಮಂತ್‌ಕುಮಾರ್ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

