ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಗೃಹ ರಕ್ಷಕ ದಳದವರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಈಜು ಸೇರಿದಂತೆ ವಿಶೇಷ ತರಬೇತಿ ನೀಡಿ ಉಡುಪಿ ಜಿಲ್ಲೆಯ ಎಲ್ಲ ಬೀಚ್‌ಗಳಿಗೆ ಜೀವರಕ್ಷಕರಾಗಿ ನಿಯೋಜಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ ಜೊತೆಯಲ್ಲಿ ಆಂತರಿಕ ಭದ್ರತಾ ಕಾರ್ಯ ಗಳನ್ನು ಗೃಹ ರಕ್ಷಕ ದಳದವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕೊರತೆ ಅಥವಾ ಸಂಕಷ್ಟ ಸಂದರ್ಭದಲ್ಲಿ ಜಿಲ್ಲಾಡಳಿತದ ಜೊತೆ ಗೃಹ ರಕ್ಷಕ ದಳದವರು ಕೈಜೋಡಿಸಿ, ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಗೃಹರಕ್ಷಕ ದಳ ಉಡುಪಿ ಜಿಲ್ಲಾ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್ ಚೂಂತಾರ್, ಚಿಕ್ಕಮಗಳೂರು ಜಿಲ್ಲಾ ಸಮಾದೇಷ್ಟೆ ನಸೀಮ್ ತಾಜ್, ಉತ್ತರ ಕನ್ನಡ ಜಿಲ್ಲಾ ಸಮಾದೇಷ್ಟ ಡಾ.ಸಂಜು ಟಿ.ನಾಯಕ್, ಉಡುಪಿ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಉಪಸ್ಥಿತರಿದ್ದರು.

ಚಿಕ್ಕಮಗಳೂರು ತಂಡಕ್ಕೆ ಸಮಗ್ರ ಪ್ರಶಸ್ತಿ: ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ತಂಡಗಳು ಭಾಗವಹಿಸಿದ್ದು, ಇದರಲ್ಲಿ ಚಿಕ್ಕಮಗಳೂರು ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸಂದೀಪ್ ಎಚ್. ಹಾಗೂ ಮಹಿಳೆಯರ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಮಾ ಎನ್.ಎಸ್. ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.