ಉಡುಪಿ: ಜಿಎಸ್ ಟಿ ಇಳಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ 48 ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದೆ. ಆದರೆ ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ, ಜಿಲ್ಲಾ ಆರ್ಥಿಕ ಪ್ರಕೋಷ್ಠ ಹಾಗೂ ಬಿಜೆಪಿ ಉಡುಪಿ ವಿಧಾನಸಭಾ ಕ್ಷೇತ್ರದ ಸಹಯೋಗದೊಂದಿಗೆ ಉಡುಪಿ ಅಜ್ಜರಕಾಡು ಹೋಟೆಲ್ ಡಯಾನ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ‘ಮುಂದಿನ ಪೀಳಿಗೆಯ ಜಿಎಸ್ಟಿ 2.0’ (ಜಿಎಸ್ಟಿ ಸುಧಾರಣೆಗಳು ಮತ್ತು ಗ್ರಾಹಕರಿಗೆ ಲಾಭಗಳು) ವಿಷಯದಲ್ಲಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

48 ಸಾವಿರ ಕೋಟಿ ರೂ. ನಷ್ಟದಲ್ಲಿ ಶೇ.50ರಷ್ಟು ಕೇಂದ್ರ ಸರಕಾರಕ್ಕೆ ನಷ್ಟ ಉಂಟಾದರೆ, ದೇಶದ ಎಲ್ಲ ರಾಜ್ಯ ಸರಕಾರಗಳಿಗೆ ಶೇ.50ರಂತೆ ಒಟ್ಟು 24 ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 15 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಇದನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ಕರೆ ನೀಡಿದರು.

ಜಿಎಸ್ ಟಿಯ ಆದಾಯದಿಂದಾಗಿ ದೇಶದ ಜಿಡಿಪಿ ದರ ಏರಿಕೆ ಆಗುತ್ತದೆ. ವಿದೇಶಿ ಹೂಡಿಕೆದಾರರು ಜಿಎಸ್ ಟಿ ವ್ಯವಸ್ಥೆ ಇರುವ ದೇಶಗಳಲ್ಲಿ ಹೂಡಿಕೆ  ಮಾಡಲು ಹೆಚ್ಚು ಒಲವು ಹೊಂದಿರುತ್ತಾರೆ. ಇದರಿಂದ ದೇಶದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠ ಸಂಚಾಲಕ ದಿವಾಕರ ಶೆಟ್ಟಿ, ಸಹ ಸಂಚಾಲಕ ಕಿರಣ್ ಕುಮಾರ್ ಬೈಲೂರು, ನಗರ ಅಧ್ಯಕ್ಷ ‌ದಿನೇಶ್ ಅಮೀನ್ ಉಪಸ್ಥಿತರಿದ್ದರು. ಅರ್ಥ ಶಾಸ್ತ್ರಜ್ಞ ವಿಶ್ವನಾಥ ಭಟ್ ವಿಚಾರ ಸಂಕಿರಣವನ್ನು ನಡೆಸಿಕೊಟ್ಟರು.