ಉಡುಪಿ: ನಾಡಿನ ಕಂಬಳ ಪ್ರಿಯರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ ನೀಡಿದ್ದು, ಕರಾವಳಿಯ ಪ್ರತಿ ಕಂಬಳಕ್ಕೂ 5 ಲಕ್ಷ ರೂಪಾಯಿ ನೀಡಲು ಸರಕಾರ ಆದೇಶ ನೀಡಿದೆ. ಕಳೆದ ವರ್ಷ ಕಂಬಳಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿರಲಿಲ್ಲ. ಈ ಬಗ್ಗೆ ಕಂಬಳಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಕರಾವಳಿಯ ಶಾಸಕರು ಬೇಡಿಕೆ ಸಲ್ಲಿಸಿದರು.

ಸ್ವತಹ ಸ್ಪೀಕರ್ ಯುಟಿ ಖಾದರ್ ಕಂಬಳ ಪರ ಬ್ಯಾಟಿಂಗ್ ಮಾಡಿದ್ದರು. ಸರ್ಕಾರ ನೆರವು ಕೊಡದಿದ್ದರೆ ನಾವೇ ಹಣ ಸಂಗ್ರಹಿಸಿ ಕಂಬಳ ಮಾಡಲು ಗೊತ್ತು ಎಂದು ಚಾಟಿ ಬೀಸಿದ್ದರು. ಯು.ಟಿ.ಖಾದರ್ ಚಾಟಿ ಬೀಸಿದ ಬೆನ್ನಲ್ಲೇ ಕಂಬಳಕ್ಕೆ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಆದೇಶ ನೀಡಿದ್ದಾರೆ.

ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಆದೇಶ ನೀಡಿದರು. 2024- 25 ನೇ ಸಾಲಿನ 24 ಜೋಡು ಕರೆ ಕಂಬಳಗಳಿಗೆ ತಲಾ 5 ಲಕ್ಷ ರೂ. ಸರ್ಕಾರದ ಆದೇಶದಿಂದ ಕಂಬಳ ಪ್ರೀಯರಲ್ಲಿ ಹರ್ಷ ಉಂಟಾಗಿದೆ. ಸಿಹಿ ಸುದ್ದಿಯ ಬೆನ್ನಲ್ಲೇ ಬಾಕಿ ಉಳಿದ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಕಂಬಳ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟು 25 ಕಂಬಳಗಳು ನಡೆಯುತ್ತವೆ. ಪ್ರತಿ ಕಂಬಳವನ್ನು ನೇರವಾಗಿ ಒಂದು ಲಕ್ಷ ಜನ ವೀಕ್ಷಿಸುತ್ತಾರೆ.
2020 21ನೇ ಸಾಲಿನಲ್ಲಿ 10 ಉಡುಪಿ ಜಿಲ್ಲೆಯ 10 ಕಂಬಳಗಳಿಗೆ ತಲಾ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ನಡೆಯುವ 53 ಸಾಂಪ್ರದಾಯಿಕ ಕಂಬಳ ಗಳಿಗೂ ಅನುದಾನ ಕೋರಲಾಗಿತ್ತು.

ಕಳೆದ ವರ್ಷ 50 ಲಕ್ಷ ಘೋಷಿಸಿ ಸರಕಾರ ಅನುದಾನ ನೀಡಿರಲಿಲ್ಲ. ಘೋಷಣೆಯಾದ 50 ಲಕ್ಷ ಬಿಡುಗಡೆಗೆ ಕಂಬಳ ಸಮಿತಿ ಒತ್ತಾಯಿಸಿದೆ. ಅದಲ್ಲದೆ ಸಾಂಪ್ರದಾಯಿಕ ಕಂಬಳ ಗಳಿಗೂ 50 ಲಕ್ಷ ಬಿಡುಗಡೆ ಮಾಡುವಂತೆ ಸಮಿತಿ ಒತ್ತಾಯ ಮಾಡಿದೆ. ಕರಾವಳಿಯ ನಂತರ ಬೆಂಗಳೂರಿನಲ್ಲೂ ತುಳುನಾಡ ಕಂಬಳ ಸದ್ದು ಮಾಡಿತ್ತು.