ಉಡುಪಿ: ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ಇದರ ಸಹಯೋಗದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಅಜ್ಜರಕಾಡಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಮಾತನಾಡಿ, ಆಯುರ್ವೇದ ಪದ್ಧತಿ ಅನುಸರಿಸಿದಲ್ಲಿ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಆಯುರ್ವೇದದಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳಿದರು.

ತರಕಾರಿ, ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕ ಹಾಗೂ ಕಲಬೆರಕೆ ಆಹಾರಗಳಿಂದ ಹೊಸ ಹೊಸ ಕಾಯಿಲೆಗಳು ನಮ್ಮನ್ನು ಬಾಧಿಸುತ್ತಿವೆ. ನಾವು ಸೇವಿಸುವ ಆಹಾರದಿಂದಾಗಿ ಅನೇಕ ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದೇವೆ. ಹೀಗಾಗಿ ಜಾಗತಿಕ ಆರೋಗ್ಯ ಇಂದಿನ ಅಗತ್ಯವಾದ ವಿಷಯವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಎಂದರು.

ಆಯುರ್ವೇದ ಭಾರತದ ಪ್ರಾಚೀನ ಪದ್ಧತಿ. ಆಯುರ್ವೇದಲ್ಲಿ ವಿವಿಧ ಕಾಯಿಲೆಗಳಿಗೆ ಪರಿಹಾರವಿದೆ. ಕೋವಿಡ್ ಸಂದರ್ಭದಲ್ಲಿಯೂ ಆಯುರ್ವೇದ ಔಷಧಿ ತುಂಬಾ ಪರಿಮಕಾರಿಯಾಗಿ ಕೆಲಸ ಮಾಡಿತ್ತು ಎಂದು ತಿಳಿಸಿದರು. ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು.