ಉಡುಪಿ: ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಿದ ಬೃಹತ್ ಮೀನಿನ ಮಾದರಿ, ಗ್ರಾಮೀಣ ಬದುಕಿನ ಸೊಗಡು, ಸಾಂಪ್ರದಾಯಿಕ ಕಲೆಗಳು ಹಾಗೂ ಪರಿಸರ ಜಾಗೃತಿಯ ಸಂದೇಶ. ಇವೆಲ್ಲವೂ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ವಸ್ತು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

2,500ಕ್ಕೂ ಅಧಿಕ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಸುಮಾರು 23 ಅಡಿ ಉದ್ದ ಮತ್ತು 11 ಅಡಿ ಎತ್ತರದ ಮೀನಿನ ಮಾದರಿಯನ್ನು ನಿರ್ಮಿಸಲಾಗಿದೆ. ಕಲಾವಿದ ವೆಂಕಟರಮಣ ಕಾಮತ್ (ವೆಂಕಿ ಪಲಿಮಾರು) ಅವರ ಮಾರ್ಗದರ್ಶನದಲ್ಲಿ ಪಂಜಿನಡ್ಕದ ಅನುದಾನಿತ ಕೆಪಿಎಸ್‌ಕೆ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಕಲಾಕೃತಿಯನ್ನು ರೂಪಿಸಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಈ ಮಾದರಿ ವೀಕ್ಷಕರ ಗಮನ ಸೆಳೆಯುತ್ತಿದೆ.

ಮೀನಿನ ಆಕಾರದ ಪ್ರವೇಶದ್ವಾರವೂ ವಿಶೇಷ ಆಕರ್ಷಣೆಯಾಗಿದೆ. ಒಳ ಪ್ರವೇಶಿಸುತ್ತಿದ್ದಂತೆ ಪರಿಸರ ಜಾಗೃತಿ ಮೂಡಿಸುವ ಕಲಾಕೃತಿಗಳು, ಸಾಲುಮರದ ತಿಮ್ಮಕ್ಕ ಮತ್ತು ಸುಕ್ರಿ ಬೊಮ್ಮಗೌಡ ಅವರ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ಉಳ್ಳಾಲದ ರಾಣಿ ಅಬ್ಬಕ್ಕನ ಪ್ರತಿಕೃತಿ ಹಾಗೂ ಮೊಗವೀರ ಸಮುದಾಯದ ಇತಿಹಾಸ ಮತ್ತು ಜಾಗೃತಿಗೆ ಸಂಬಂಧಿಸಿದ ಮಾಹಿತಿ ಫಲಕಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿವೆ.

ಗ್ರಾಮೀಣ ಜೀವನಶೈಲಿ, ಕೃಷಿ ಪರಂಪರೆ, ಜನಪದ ಸಂಸ್ಕೃತಿ ಮತ್ತು ಕರಕುಶಲ ಕಲೆಗಳನ್ನು ಪರಿಚಯಿಸುವ ಹಲವು ಮಳಿಗೆಗಳನ್ನು ತೆರೆಯಲಾಗಿದೆ. ಮರದ ಕೆತ್ತನೆ, ತೆಂಗಿನಕಾಯಿ ಮತ್ತು ತೆಂಗಿನ ಚಿಪ್ಪಿನ ಕಲಾಕೃತಿಗಳು, ಬಿದಿರಿನ ಉತ್ಪನ್ನಗಳು, ಮಣ್ಣಿನ ಗೊಂಬೆಗಳು, ಮೆಟಲ್ ಆರ್ಟ್, ರೇಸಿನ್ ಆರ್ಟ್ ಹಾಗೂ ವಿವಿಧ ಹಸ್ತಕಲಾ ವಿನ್ಯಾಸಗಳು ಕಲಾಸಕ್ತರನ್ನು ಆಕರ್ಷಿಸುತ್ತಿವೆ.

ಶಾಲಿನಿ ಶಂಕರ್ ಅವರ ವಾಲ್ ಆರ್ಟ್, ಸಿರಿ ಆರ್ಟ್ಸ್‌ನ ಕಲಾಕೃತಿಗಳು, ಯತೀಶ್ ಕಿದಿಯೂರು ಅವರ ಜಾನಪದ ಮುಖವಾಡಗಳು, ಗಣೇಶನ ಪ್ರತಿಮೆಗಳು ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಕಲಾಕೃತಿಗಳು ಪ್ರದರ್ಶನದ ವೈವಿಧ್ಯವನ್ನು ಹೆಚ್ಚಿಸಿವೆ. ಯಕ್ಷಗಾನದ ಕಿರೀಟದ ಮಾದರಿ, ಬೋಲ್ಟ್‌ ಮತ್ತು ನಟ್‌ಗಳನ್ನು ಬಳಸಿ ರೂಪಿಸಿರುವ ಶಿವನ ವಿಗ್ರಹ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕಲಾತ್ಮಕ ಪ್ರತಿಕೃತಿ, ಮಟ್ಟುಗುಳ್ಳದ ಮಾದರಿ ಹಾಗೂ ಧಾನ್ಯಗಳಿಂದ ರಚಿಸಿರುವ ಶಿವನ ವಿಗ್ರಹವೂ ಗಮನ ಸೆಳೆಯುತ್ತಿವೆ.

ಮಡಿಕೆಗಳ ಮೇಲೆ ಚಿತ್ರ ಬಿಡಿಸುವ ಕಲೆ, ಕಡ್ಡಿಗಳಿಂದ ರೂಪಿಸಿದ ಕಲಾಕೃತಿಗಳು, ವಿಜ್ಞಾನಾಧಾರಿತ ವಿನ್ಯಾಸಗಳು ಮತ್ತು 3ಡಿ ಆರ್ಟ್ ಪ್ರದರ್ಶನವು ಮಕ್ಕಳಲ್ಲಿ ಕುತೂಹಲ ಮೂಡಿಸುತ್ತಿವೆ. ಗ್ರಾಮೀಣ ಸೊಗಡಿನ ಮನೆಯನ್ನು ಹೋಲುವ ಮಾದರಿಯೂ ಸಂದರ್ಶಕರನ್ನು ಸೆಳೆಯುತ್ತಿದೆ.

ಮೀನುಗಾರಿಕಾ ಇಲಾಖೆಯ ಸಹಕಾರದಲ್ಲಿ ವಿವಿಧ ಸಮುದ್ರ ಮೀನುಗಳು ಮತ್ತು ಅಲಂಕಾರಿಕ ಮೀನುಗಳನ್ನು ಪ್ರದರ್ಶಿಸಲಾಗಿದೆ. ಸಮುದ್ರ ಜೀವವೈವಿಧ್ಯ, ಮೀನುಗಾರಿಕೆ ಹಾಗೂ ಸಮುದ್ರ ಪರಿಸರದ ಕುರಿತು ಅರಿವು ಮೂಡಿಸುವ ಈ ಮಳಿಗೆ ಮಕ್ಕಳಿಗೆ ಜ್ಞಾನವರ್ಧಕವಾಗಿದೆ. ತೋಟಗಾರಿಕಾ ಇಲಾಖೆಯ ಮಳಿಗೆಯೂ ಪ್ರದರ್ಶನದಲ್ಲಿದೆ.

ದಸರಾ ಮಹೋತ್ಸವದ ರೂವಾರಿ ಜಿ. ಶಂಕರ್ ಅವರ ಸಲಹೆಯಂತೆ ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ವಸ್ತು ಪ್ರದರ್ಶನವನ್ನು ರೂಪಿಸಲಾಗುತ್ತಿದೆ. ವಿ.ಕೆ. ಯಾದವ್, ನಿತ್ಯಾನಂದ ಕರ್ಕೇರ ಮತ್ತು ದಿವಾಕರ ಕಾರ್ವಿ ಅವರ ಸಹಕಾರದೊಂದಿಗೆ ಪ್ರದರ್ಶನ ಆಯೋಜಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದು ವಸ್ತು ಪ್ರದರ್ಶನದ ಸಂಚಾಲಕ ಯತೀಶ್ ಕಿದಿಯೂರು ತಿಳಿಸಿದ್ದಾರೆ.