ಉಡುಪಿ: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ – 66ರ ಕುವೆಂಪು ಶಾಲೆ ಸಮೀಪದಲ್ಲಿರುವ ಗುರು ಬ್ರಹ್ಮ ಜನರಲ್ ಸ್ಟೋರ್ ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿ ಸುಮಾರು ₹40 ಲಕ್ಷಕ್ಕೂ ಅಧಿಕ ನಷ್ಟ ಉಂಟಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ರಾತ್ರಿ ಸುಮಾರು 1.30ರ ವೇಳೆಗೆ ಅಂಗಡಿಯೊಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಅಂಗಡಿಗೆ ವ್ಯಾಪಿಸಿದೆ.
ಅಗ್ನಿ ಅವಘಡದಲ್ಲಿ ದಿನಸಿ ಸಾಮಗ್ರಿಗಳು, ಫ್ರಿಡ್ಜ್‌ಗಳು, ಪೀಠೋಪಕರಣಗಳು ಹಾಗೂ ಇತರೆ ವಾಣಿಜ್ಯೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದರಿಂದ ಸುಮಾರು ₹40 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಅಂಗಡಿಯಲ್ಲಿದ್ದ ಮೂರು ಫ್ರಿಡ್ಜ್‌ಗಳ ಪೈಕಿ ಒಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಆದರೆ ಅಗ್ನಿ ಅವಘಡಕ್ಕೆ ನಿಖರ ಕಾರಣ ತನಿಖೆಯ ಬಳಿಕವೇ ತಿಳಿದುಬರಬೇಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಡೆದರು. ಈ ಸಂಬಂಧ ಸಂಬಂಧಿತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅಗ್ನಿ ಅವಘಡದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

