ಉಡುಪಿ: ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿರುವ ಪಂಚಾಯತ್ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ತ್ಯಾಜ್ಯಗಳನ್ನು ರಾಶಿ ಹಾಕಿದ್ದು, ರೋಗ ಭೀತಿ ಎದುರಾಗಿದೆ.
ನಿತ್ಯ ಸಾವಿರಾರು ಜನರು ಸಂಚರಿಸುವ ಪ್ರಮುಖ ರಸ್ತೆಯ ಪಕ್ಕದಲ್ಲಿರುವ ಪಂಚಾಯತ್ ಅಧೀನದ ಅಂಗಡಿಗಳ ಹಿಂಭಾಗದಲ್ಲಿ ಲೋಡ್‌ಗಟ್ಟಲೆ ಕಸ ಸಂಗ್ರಹವಾಗಿದ್ದು, ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ತ್ಯಾಜ್ಯ ರಾಶಿಯ ಸಮೀಪದಲ್ಲೇ ಬಸ್ ತಂಗುದಾಣ ಹಾಗೂ ಆಟೊರಿಕ್ಷಾ ತಂಗುದಾಣಗಳಿರುವುದರಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಕಸದ ರಾಶಿಯಿಂದ ಪರಿಸರ ಮಾಲಿನ್ಯ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತೆ ಕಾಪಾಡುವ ಹೊಣೆಗಾರಿಕೆ ಹೊಂದಿರುವ ಗ್ರಾಮ ಪಂಚಾಯತ್ ಕಸವನ್ನು ಇಲ್ಲಿ ಸಂಗ್ರಹಿಸಿರುವುದು ವಿಪರ್ಯಾಸ ಸರಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯವನ್ನು ತಕ್ಷಣ ವಿಲೇವಾರಿ ಮಾಡಿ, ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪಂಚಾಯತ್‌ ಆಡಳಿತ ಈ ಕುರಿತು ಶೀಘ್ರ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.