ಉಡುಪಿ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅನುದಾನಿತ ಶಾಲಾ ಸಂಘಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20000 ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ ಹಾಗೂ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮ ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸುವ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಕನ್ನಡ ಶಾಲೆಗಳು ನಮ್ಮ ಭಾಷೆಯ ನರನಾಡಿಯಾಗಿದ್ದು, ಅದನ್ನು ಉಳಿಸುವುದು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಕರೆನೀಡಿದರು.

ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭಾಗ್ ಮಾತನಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ದಾರಿಗಳಿವೆ. ಅದರ ಮುಂದಾ ಳತ್ವ ವಹಿಸಿಕೊಳ್ಳಲು ಶಿಕ್ಷಕರು ಆಸಕ್ತಿ ತೋರುತ್ತಿಲ್ಲ. ಶಿಕ್ಷಕರು ಅನ್ಯಾಯದ ವಿರುದ್ಧ ಮಾತನಾಡಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ತರಬೇತಿಗೊಳಿಸಬೇಕು. ನ್ಯಾಯಕ್ಕಾಗಿ ಸರಿಯಾದ ಮಾರ್ಗವನ್ನು ನಾವು ಕಂಡುಕೊಳ್ಳದಿದ್ದರೆ ಬ್ರಿಟಿಷರ ಆಡಳಿತಕ್ಕಿಂತ ಹೀನಾಯ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ, ಪರಿಸರ ಹಾಗೂ ಕೃಷಿ ಲೇಖಕ ಎನ್. ನರೇಂದ್ರ ರೈ ದೆರ್ಲ ಅವರಿಗೆ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ ಕಂದಾವರ ಮಾತನಾಡಿದರು.

ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಪ್ರಾಥಮಿಕ ಅನುದಾನಿತ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್‌ನ ಉಪಾಧ್ಯಕ್ಷ ಹಾಲಾಡಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.