ಉಡುಪಿ: ಸಮಾಜ ಸೇವೆ ಎಂದರೆ ಕೇವಲ ಹಣದ ನೆರವು ನೀಡುವುದಲ್ಲ, ತಮ್ಮ ವೃತ್ತಿಯನ್ನೇ ಸೇವೆಯಾಗಿ ರೂಪಿಸಿಕೊಳ್ಳುವುದೂ ನಿಜವಾದ ಮಾನವೀಯತೆ. ಉಡುಪಿ ಜಿಲ್ಲೆಯ ಕೋಟ ವಲಯ ಸವಿತ ಸಮಾಜದ ಸದಸ್ಯರು ಕಳೆದ ಒಂದು ವರ್ಷದಿಂದ ಇದೇ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಸಾಲಿಗ್ರಾಮ ಸಮೀಪದ ತೋಡ್ಕಟ್ಟು ಹೊಸ ಬದುಕು ಆಶ್ರಮಕ್ಕೆ ಪ್ರತಿ ತಿಂಗಳು ಭೇಟಿ ನೀಡಿ ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ನೀಡುವ ಮೂಲಕ ಅವರ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದಾರೆ.

ಸಾಲಿಗ್ರಾಮ ಸಮೀಪದ ತೋಡ್ಕಟ್ಟು ಹೊಸ ಬದುಕು ಆಶ್ರಮ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಗತಿಕರಿಗೆ ಹೊಸ ಭರವಸೆ ನೀಡುತ್ತಿರುವ ಮಾನವೀಯತೆಯ ನೆಲೆ. ಕುಟುಂಬ, ಆಸರೆ, ಆಧಾರ ಕಳೆದುಕೊಂಡ ಅನೇಕ ಮಂದಿಗೆ ಇಲ್ಲಿ ಊಟ, ವಸತಿ, ಚಿಕಿತ್ಸೆ ಹಾಗೂ ಪ್ರೀತಿಯ ಆರೈಕೆ ದೊರೆಯುತ್ತಿದೆ. ಸಮಾಜದ ವಿವಿಧ ಹಿನ್ನೆಲೆಯಿಂದ ಬಂದಿರುವ ಆಶ್ರಮವಾಸಿಗಳು ಇಲ್ಲಿ ಹೊಸ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಈ ಆಶ್ರಮಕ್ಕೆ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ತಪ್ಪದೆ ಆಗಮಿಸುತ್ತಿರುವವರು ಕೋಟ ವಲಯ ಸವಿತ ಸಮಾಜದ ಸದಸ್ಯರು. ತಮ್ಮ ವೃತ್ತಿಯನ್ನು ಕೇವಲ ಜೀವನೋಪಾಯಕ್ಕೆ ಸೀಮಿತಗೊಳಿಸದೆ ಸಮಾಜ ಸೇವೆಯನ್ನಾಗಿ ಮಾಡಿಕೊಂಡಿರುವ ಇವರು ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ನೀಡುತ್ತಿದ್ದಾರೆ. ಕೂದಲು ಕತ್ತರಿಸುವುದಷ್ಟೇ ಅಲ್ಲ. ಆತ್ಮೀಯವಾಗಿ ಮಾತನಾಡುವುದು, ಅವರ ಕಷ್ಟ-ಸುಖಗಳನ್ನು ಆಲಿಸುವುದು, ಆತ್ಮವಿಶ್ವಾಸ ತುಂಬುವುದು. ಇದೇ ಈ ಸೇವೆಯ ವಿಶೇಷತೆ.

ಸೇವೆಯ ಬಳಿಕ ಆಶ್ರಮವಾಸಿಗಳ ಮುಖದಲ್ಲಿ ಮೂಡುವ ನಗು ಇವರಿಗೆ ಸಿಗುವ ಅತ್ಯಂತ ದೊಡ್ಡ ಗೌರವ.ಹೊಸ ಬದುಕು ಆಶ್ರಮವನ್ನು ವಿನಯ ಚಂದ್ರ ಮತ್ತು ರಾಜೇಶ್ವರಿ ದಂಪತಿ ತಮ್ಮ ಸ್ವಂತ ಆದಾಯ ಹಾಗೂ ದಾನಿಗಳ ಸಹಕಾರದೊಂದಿಗೆ ನಡೆಸುತ್ತಿದ್ದಾರೆ. ಸಮಾಜದಿಂದ ಕಡೆಗಣಿಸಲ್ಪಟ್ಟ, ಅನಾಥ ಹಾಗೂ ನಿರ್ಗತಿಕರಿಗೆ ಆಶ್ರಯ ನೀಡುತ್ತಿರುವ ಈ ಆಶ್ರಮಕ್ಕೆ ಆಹಾರ, ಔಷಧಿ, ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ದಾನಿಗಳ ನೆರವು ನಿರಂತರವಾಗಿ ಅಗತ್ಯವಿದೆ. ಮಾನವೀಯತೆಯ ಮೇಲೆ ನಂಬಿಕೆಯಿಟ್ಟಿರುವ ಈ ದಂಪತಿ, ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವಾಗಿಸಿಕೊಂಡಿದ್ದಾರೆ.

ಯಾವುದೇ ಪ್ರಚಾರದ ಆಸೆಯಿಲ್ಲ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲ. ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಈ ಸೇವೆ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರುತ್ತಿದೆ. ಕೈಯಲ್ಲಿರುವ ಕತ್ತರಿ ಕೇವಲ ಕೂದಲು ಕತ್ತರಿಸುವ ಸಾಧನವಲ್ಲ. ಮತ್ತೊಬ್ಬರ ಬದುಕಿನಲ್ಲಿ ಆತ್ಮಗೌರವ, ಆತ್ಮವಿಶ್ವಾಸ ಮತ್ತು ಹೊಸ ಭರವಸೆ ಮೂಡಿಸುವ ಸಾಧನವೂ ಆಗಬಹುದು ಎಂಬುದನ್ನು ಕೋಟ ವಲಯ ಸವಿತ ಸಮಾಜದ ಸದಸ್ಯರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಾಬೀತುಪಡಿಸಿದ್ದಾರೆ.