ಉಡುಪಿ: ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರ ನೇತೃತ್ವದಲ್ಲಿ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆರಂಭಗೊಂಡಿರುವ ಖಾದ್ಯಮೇಳಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೇಳದಲ್ಲಿ ಬಾಯಿರುಚಿ ತಣಿಸುವ ವೈವಿಧ್ಯಮಯ ಖಾದ್ಯಗಳು ಆಹಾರಪ್ರಿಯರನ್ನು ಸೆಳೆಯುತ್ತಿದ್ದರೆ, ಕರಕುಶಲ ವಸ್ತುಗಳು, ಸೀರೆಗಳು, ಮಹಿಳೆಯರ ಸಿಂಗಾರ ಸಾಮಗ್ರಿಗಳು ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೂ ಗಮನ ಸೆಳೆಯುತ್ತಿದೆ.

ಒಟ್ಟು 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಸ್ಥಳೀಯ ಉತ್ಪನ್ನಗಳ ಜತೆಗೆ ವಿವಿಧ ಭಾಗಗಳ ವಿಶೇಷ ಆಹಾರ ಪದಾರ್ಥಗಳು ಹಾಗೂ ಕೈಗಾರಿಕಾ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗಿವೆ.

ಕುಟುಂಬ ಸಮೇತರಾಗಿ ಆಗಮಿಸಿದ ಜನರು ಖರೀದಿ ಮತ್ತು ಸವಿಯುವಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸಭಾಂಗಣದಲ್ಲಿ ದಿನವಿಡೀ ಸಂಭ್ರಮದ ವಾತಾವರಣ ಕಂಡುಬಂತು. ಮೇಳಕ್ಕೆ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡಿದ್ದು, ವ್ಯಾಪಾರಸ್ಥರು ಸಂತಸ ವ್ಯಕ್ತಪಡಿಸಿದರು.