ಉಡುಪಿ: ಶಾಸಕ ಯಶ್ಪಾಲ್ ಸುವರ್ಣ ಸೇರಿ 11 ಮಂದಿ ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮಣಿಪಾಲದ ಸಿಂಡಿಕೇಟ್ ಸರ್ಕಲ್ನಲ್ಲಿ ಸೆ.6ರಂದು ಪ್ರಾಂಶುಪಾಲರಿಗೆ ಪ್ರಶಸ್ತಿ ವಾಪಸ್ ಪಡೆದ ವಿಚಾರವಾಗಿ ಹೆದ್ದಾರಿ ತಡೆದು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದರು. ಜೊತೆಗೆ ಹಿಂದೂ ವಿರೋಧಿ ಸಿದ್ದರಾಮಯ್ಯ ತೊಲಗಿಸಿ ಎಂದು ಘೋಷಣೆ ಕೂಡ ಕೂಗಿದ್ದರು.
ಈ ಸಂದರ್ಭ ಸಿಎಂ ಪ್ರತಿಕೃತಿಗೆ ನಗರಸಭಾ ಸದಸ್ಯ ಗಿರೀಶ್ ಅಂಚನ್, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಚಪ್ಪಲಿಯಿಂದ ಹೊಡೆದಿದ್ದರು. ಈ ಕುರಿತು ಎನ್ಎಸ್ಯುಐ ಮುಖಂಡ ಸೌರಭ್ ಬಲ್ಲಾಳ್ ಶಾಂತಿಭಂಗ ತರುವ ಉದ್ದೇಶದಿಂದ ಕೃತ್ಯ ಎಸೆಗಿದ್ದಾರೆ ಎಂದು 11 ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

