ಉಡುಪಿ: ಉಡುಪಿ ಜಿಲ್ಲೆಯ ಕ್ರೀಡಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ಹಿಂದೆ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿರುವ 3 ಕೋಟಿ ರೂ. ಅನುದಾನವನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ.

ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಬೇಕಿದೆ. ಉತ್ತಮ ಸೌಲಭ್ಯಗಳು ಸಿಕ್ಕಿದರೆ ಇನ್ನಷ್ಟು ಚಾಂಪಿಯನ್ ಶಿಫ್ ಗಳು ಈ ಊರಿಗೆ ಬರುವಂತಾಗುತ್ತದೆ. ಈ ಕ್ರೀಡಾಂಗಣಕ್ಕೂ ಅಂದಾಜು 30 ಲಕ್ಷ ರೂ. ನೀಡುವಂತೆ ಕೋರಿದ್ದೇನೆ. ಸಿಎಂ ಅನುದಾನ ನೀಡುವ ಭರವಸೆ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಿರಿಯರ ಹಾಗೂ ಅಂಡರ್-23 ಅಥ್ಲೆಟಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ವಿಭಾಗೀಯ ಮಟ್ಟದಲ್ಲೂ ಸುಸ್ಸಜ್ಜಿತ ಕ್ರೀಡಾಂಗಣ ನಿರ್ಮಾಣವಾದರೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗುವ ಕ್ರೀಡಾಪಟುಗಳ ಸಂಖ್ಯೆಯೂ ಹೆಚ್ಚಾಗಬಹುದು.

ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ತರಬೇತಿ ನೀಡಿದರೆ ಉತ್ತಮ ಕ್ರೀಡಾಪಟುಗಳಾಗುತ್ತಾರೆ ಎಂದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು‌.

ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಬೆಂಗಳೂರು ಎನ್‌ಇಬಿ ಸ್ಪೋರ್ಟ್ಸ್‌ನ ಸಿಎಂಡಿ ನಾಗರಾಜ ಅಡಿಗ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ನಾಯಕರಾದ ಅಶೋಕಕುಮಾರ್ ಕೊಡವೂರು, ರಮೇಶ್ ಕಾಂಚನ್, ಪ್ರಸಾದ್‌ರಾಜ್ ಕಾಂಚನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಕೆ.ಆಶಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಿನೇಶ್ ಕುಮಾರ್ ಎ. ವಂದಿಸಿದರು. ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಕ್ರೀಡಾಪಟುಗಳ ನಡುವೆ ಸ್ಪರ್ಧಾತ್ಮಕ ಮನೋಭಾವನೆ ಸ್ಪಷ್ಟವಾಗಿ ಗೋಚರಿಸಿತು. ಒಟ್ಟು 10 ವಿಭಾಗಗಳಲ್ಲಿ 150 ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಮೂರು ದಿನಗಳ ಕಾಲ ಕ್ರೀಡಾಂಗಣ ಕ್ರೀಡಾ ಸಂಭ್ರಮದಲ್ಲಿ ತೇಲಲಿದೆ.