ಉಡುಪಿ: ಮೊಂಥಾ ಚಂಡಮಾರುತದ ಪರಿಣಾಮವಾಗಿ ಹಾಗೂ ಕೆಲ ದಿನಗಳಿಂದ ಸುರಿಯುತ್ತಿರುವ ಗಾಳಿಮಳೆಯಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ಜಿಲ್ಲೆಯಾದ್ಯಂತ ಕಡಲ ಭೋರ್ಗರೆತ ಹೆಚ್ಚಾಗಿದೆ. ಇದರಿಂದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಬೀಚ್ ಬಳಿ ಕಡಲ್ಕೊರೆತ ಉಂಟಾಗಿದೆ.

ಈಗಾಗಲೇ ಹಲವು ಪ್ರದೇಶ ಸಮುದ್ರ ಪಾಲಾಗಿದ್ದು, ತೆಂಗಿನಮರಗಳು ಕಡಲ ಒಡಲು ಸೇರುವ ಭೀತಿ ಎದುರಾಗಿದೆ. ಬೀಚ್ ಸುತ್ತಮುತ್ತ ಕಡಲೊರೆತ ತೀವ್ರಗೊಂಡಿದ್ದು, ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಬಿರುಗಾಳಿಯ ಅಬ್ಬರವು ಇದೇ ರೀತಿ ಮುಂದುವರಿದರೆ ಕರಾವಳಿಯ ರಸ್ತೆಗಳು ಮತ್ತು ಜನವಸತಿ ಪ್ರದೇಶಗಳಿಗೂ ಹಾನಿಯಾಗುವ ಆತಂಕ ಸೃಷ್ಟಿಯಾಗಿದೆ.

ಕಡಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಮೂಲಕ ಮೀನುಗಾರರು ಸಮುದ್ರಕ್ಕಿಳಿಯದಂತೆ ನಿರ್ಬಂಧ ವಿಧಿಸಲಾಗಿದೆ. ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯು ಜೋರಾಗಿದೆ.