ಉಡುಪಿ: ಅಧಿಕಾರಿಗಳ ಅವೈಜ್ಞಾನಿಕ ಮಾದರಿಯ ಕಾನೂನುಗಳಿಂದಾಗಿ ಹಂಚಿನ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಿದ್ದು, ಸುಮಾರು 2 ಸಾವಿರ ಕಾರ್ಮಿಕ ಕುಟುಂಬಗಳು ಅತಂತ್ರವಾಗುವ ಆತಂಕದಲ್ಲಿದ್ದಾರೆ ಎಂದು ಕುಂದಾಪುರ ಹಂಚು ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ಟಿ ಸೋನ್ಸ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆವೆ ಮಣ್ಣಿನ ಗಣಿಗಾರಿಕೆ ನಡೆಸಲು ಇಲಾಖೆಗಳು ತುಂಬಾ ಸಮಸ್ಯೆಯನ್ನು ಮಾಡುತ್ತಿದೆ. ದಶಕಗಳಿಂದ ಇಲ್ಲದಿದ್ದ ನಿಯಮಗಳನ್ನು ಹೇರಿ ಕಾರ್ಖಾನೆ ಹಾಗು ಕಾರ್ಮಿಕರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಾರೆ. ಆವೆಮಣ್ಣಿನ ಗಣಿಗಾರಿಕೆಯನ್ನು ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಇದಕ್ಕೂ ಪ್ರಾಯೋಗಿಕಾಗಿ ಸಾಧ್ಯವಲ್ಲದ ನೀತಿಗಳನ್ನು ಹೇರುತ್ತಿರುವುದು ಸರಿಯಲ್ಲ ಎಂದರು.
ಶತಮಾನಗಳಿಂದ ಮಂಗಳೂರು ಹಂಚುಗಳನ್ನು ನಾವು ಈ ಭಾಗದಲ್ಲಿ ತಯಾರಿಸುತ್ತಿದ್ದೇವೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿ 80, ಕುಂದಾಪುರದಲ್ಲಿ 17, ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿತ್ತು. ಆದರೆ ಆವಿ ಮಣ್ಣಿನ ಕೊರತೆ ಹಾಗು ಕಾರ್ಮಿಕರ ಕೊರತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಮುಚ್ಚಲ್ಪಟ್ಟಿದೆ. ಕುಂದಾಪುರದಲ್ಲಿ ಕೇವಲ 9, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.
ಹಂಚಿನ ಕಾರ್ಖಾನೆಗೆ ಬೇಕಾದ ಆವೆ ಮಣ್ಣನ್ನು ಖಾಸಗಿ ಭೂಮಿಯಿಂದ ಮಾತ್ರ ತೆಗೆಯಲಾಗುತ್ತಿದೆ. ಈವರೆಗೂ ಸರ್ಕಾರಿ ಭೂಮಿಯಿಂದ ಆವೆ ಮಣ್ಣನ್ನು ತೆಗೆದಿಲ್ಲ. ರಾಯಧನದಿಂದ ಯಾವುದೇ ರಿಯಾಯತಿಯನ್ನು ಪಡೆದಿಲ್ಲ. ಆದರೆ ಏಕಾಏಕಿ ಉಡುಪಿ ಜಿಲ್ಲಾ ಖನಿಜ ಇಲಾಖೆ ನೀಡಿರುವ ಷರತ್ತಿನಂತೆ, ಇತರೆ ಇಲಾಖೆಗಳಿಂದ ಪರವಾನಿಗೆ ಪಡೆದು ಖನಿಜ ಇಲಾಖೆಗೆ ಸಲ್ಲಿಸಿ ಅವರಿಂದ ಆವೆಮಣ್ಣನ್ನು ತರಲು ಪರವಾನಿಗೆ ಪಡೆಯಲು ಅಸಾಧ್ಯ ಎಂದರು.

