ಉಡುಪಿ: ಕರಾವಳಿ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಚಿಂತನೆಗಳನ್ನು ರೂಪಿಸಲಾಗುತ್ತಿದೆ. ದೊಡ್ಡ ಉದ್ಯಮಗಳನ್ನು ತರುವುದು ಕಷ್ಟವಾಗಬಹುದು. ಆದರೆ ಸಣ್ಣ–ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಮಂಗಳೂರಿನಲ್ಲಿ ಶುಕ್ರವಾರ ನಡೆಯುತ್ತಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ದೇಶದ ಹಲವು ರಾಜ್ಯಗಳು ಕರಾವಳಿಯನ್ನು ಬಳಸಿಕೊಂಡು ಕೋಸ್ಟಲ್ ಟೂರಿಸಂ ಅಭಿವೃದ್ಧಿಪಡಿಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಉಡುಪಿಯಲ್ಲಿ ಪ್ರತಿವರ್ಷ ಸರ್ಫಿಂಗ್ ಆಯೋಜಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉಡುಪಿ ಸರ್ಫಿಂಗ್‌ ಮೂಲಕ ಗುರುತಿಸಿಕೊಂಡರೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಇಂತಹ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೂ ನೆರವಾಗಲಿದೆ ಎಂದು ಹೇಳಿದರು.

ಕರಾವಳಿಯ ಅಭಿವೃದ್ಧಿಯಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಇಲ್ಲಿಯೇ ಉದ್ಯೋಗ ದೊರೆತರೆ ಯುವಕರು ಬೇರೆ ರಾಜ್ಯ, ದೇಶಗಳಿಗೆ ತೆರಳುವ ಅಗತ್ಯ ಕಡಿಮೆಯಾಗುತ್ತದೆ. ಕರಾವಳಿಯನ್ನು ಹಾಳು ಮಾಡುವಂತಹ ಯಾವುದೇ ಉದ್ಯಮವನ್ನು ಇಲ್ಲಿ ತರುವುದಿಲ್ಲ ಎಂದರು.

ಕಸ್ತೂರಿರಂಗನ್ ವರದಿ ಕುರಿತು ಚರ್ಚೆ
ಕಸ್ತೂರಿರಂಗನ್ ವರದಿಯನ್ನು ಸರ್ಕಾರ ಈಗಾಗಲೇ ತಿರಸ್ಕರಿಸಿದೆ. ಸೆ.21, 22 ಮತ್ತು 23ರಂದು ಕಸ್ತೂರಿರಂಗನ್ ವಿಚಾರವಾಗಿ ಸಭೆ ನಡೆಸಿ ಮತ್ತಷ್ಟು ಚರ್ಚಿಸಲಾಗುವುದು. ಇದೇ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನೂ ಅವಲೋಕಿಸಲಾಗುವುದು. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸರ್ಕಾರದಿಂದ ಅಗತ್ಯ ನೆರವು ನೀಡುವ ಕುರಿತು ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

‘ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ವೀಕ್’ ಹೇಳಿಕೆಗೆ ಪ್ರತಿಕ್ರಿಯೆ:
‘ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ವೀಕ್ ಆಗಿದೆ’ ಎಂಬ ಶಾಸಕ ರಾಜಣ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ. ಆದರೆ ಪಕ್ಷಕ್ಕೆ ತನ್ನದೇ ಆದ ಚಿಂತನೆ ಮತ್ತು ಕಾರ್ಯಯೋಜನೆ ಇದೆ ಎಂದರು.

ಕರಾವಳಿಯಲ್ಲಿ ಪಕ್ಷದ ಬಲವರ್ಧನೆಗಾಗಿ ಸಂಪುಟ ಸಭೆ ನಡೆಸಲಾಗುತ್ತಿದೆ ಎಂಬ ಆರೋಪದ ಕುರಿತು, ಅಭಿವೃದ್ಧಿ ಕೆಲಸಗಳು ನಡೆದಾಗ ಸ್ವಾಭಾವಿಕವಾಗಿಯೇ ಪಕ್ಷಕ್ಕೂ ಬಲ ಬರಲಿದೆ. ಈ ಭಾಗದಲ್ಲಿ ಸರ್ಕಾರ ಕೆಲಸ ಮಾಡಿದ್ದೇವೆ ಎಂದಾದರೆ ಅದರ ಪರಿಣಾಮ ಖಂಡಿತವಾಗಿಯೂ ಕಂಡುಬರಲಿದೆ ಎಂದು ಹೇಳಿದರು.

‘ಕಲಬುರಗಿ ಸಂಪುಟದಿಂದ ಪ್ರಯೋಜನವಿಲ್ಲ’ ಆರೋಪಕ್ಕೆ ತಿರುಗೇಟು:
ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬ ಬಸನಗೌಡ ಪಾಟೀಲ ಯತ್ನಾಳ್ ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಕಲಬುರಗಿಗೆ ಅನೇಕ ಯೋಜನೆಗಳನ್ನು ಸರ್ಕಾರ ನೀಡಿದೆ. ಮಂಗಳೂರಿನ ಸಂಪುಟ ಸಭೆಯಲ್ಲಿಯೂ ಹಲವು ವಿಚಾರಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಂಪುಟದಲ್ಲಿ ನಿರ್ಧಾರ ಕೈಗೊಂಡು ಅದನ್ನು ಅನುಷ್ಠಾನಗೊಳಿಸದಿದ್ದರೆ ಸರ್ಕಾರಕ್ಕೆ ಬೆಲೆ ಇರುವುದಿಲ್ಲ. ಆದ್ದರಿಂದ ವಿಚಾರಗಳನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇಲ್ಲವಾದರೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

‘ಮೀನು ತಿನ್ನಲು ಕರಾವಳಿಗೆ ಬಂದಿದ್ದಾರೆ’ ಎಂಬ ಟೀಕೆಗೆ ಉತ್ತರ:
ಕರಾವಳಿಯಲ್ಲಿ ಮೀನು ತಿನ್ನುವ ಉದ್ದೇಶದಿಂದ ಸಂಪುಟ ಸಭೆ ಕರೆಯಲಾಗಿದೆ ಎಂಬ ಯತ್ನಾಳ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕೆಲಸ ಮಾಡಿದರೂ ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಸರ್ಕಾರ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಮೀನು ತಿನ್ನಲು ಕರಾವಳಿಗೆ ಬರಬೇಕಾದ ಅಗತ್ಯವಿಲ್ಲ, ಬೆಂಗಳೂರಿನಲ್ಲಿಯೂ ಮೀನು ಸಿಗುತ್ತದೆ ಎಂದು ಹೇಳಿದರು.

‘ಗೋವಾ ಮಾದರಿ’ ಹೇಳಿಕೆಗೆ ಪ್ರತಿಕ್ರಿಯೆ:ಕರಾವಳಿ ಪ್ರವಾಸೋದ್ಯಮಕ್ಕೆ ಗೋವಾ ಮಾದರಿ ಅನುಸರಿಸಬೇಕು ಎಂಬ ಯತ್ನಾಳ್ ಅವರ ಹೇಳಿಕೆ ಕುರಿತು, ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸರ್ಕಾರಕ್ಕೂ ಪರಿಜ್ಞಾನವಿದೆ ಎಂದರು.

ಯುವಕರಿಗೆ ಉದ್ಯೋಗ ನೀಡಬೇಕೇ, ಬೇಡವೇ ಎಂಬುದು ಪ್ರಮುಖ ಪ್ರಶ್ನೆ. ಕರಾವಳಿಯಲ್ಲಿಯೇ ಉದ್ಯೋಗ ಸಿಕ್ಕರೆ ಇಲ್ಲಿನ ಯುವಕರು ಬೇರೆಡೆಗೆ ಏಕೆ ಹೋಗಬೇಕು? ಕರಾವಳಿ ಅಭಿವೃದ್ಧಿಯಾದರೆ ಇಲ್ಲಿನ ಯುವಕರು ಬೇರೆ ರಾಜ್ಯ, ದೇಶಗಳಿಗೆ ತೆರಳುವ ಅಗತ್ಯ ಇರುವುದಿಲ್ಲ. ನಮ್ಮ ಮಕ್ಕಳು ನಮ್ಮಲ್ಲಿಯೇ ಉಳಿಯಬೇಕು ಎಂಬ ಉದ್ದೇಶದಿಂದ ಕರಾವಳಿ ಅಭಿವೃದ್ಧಿಯ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.