ಉಡುಪಿ: ಕೃಷ್ಣಮಠದ ರಾಜಾಂಗಣದಲ್ಲಿ ಏಕಾದಶಿಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಜಗದ್ಗುರು ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಾರ್ಯಕ್ರಮದಲ್ಲಿ ಇಬ್ಬರು ಮಹಿಳೆಯರು ನಡೆಸಿಕೊಟ್ಟ ಮಾತುಕತೆಯ ವೇಳೆ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ಬೆಳವಣಿಗೆಯನ್ನು ಶಂಕರಾಚಾರ್ಯರ ಸಿದ್ಧಾಂತವನ್ನು ಪ್ರತಿಪಾದಿಸುವ ಸಂಘಟನೆಗಳು ಹಾಗೂ ಕೆಲವು ಹಿಂದೂ ಪರ ಹೋರಾಟಗಾರರು ಖಂಡಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಅವರು, ಘಟನೆ ಕುರಿತು ಕ್ಷಮೆಯಾಚಿಸಬೇಕು ಹಾಗೂ ಉಡುಪಿ ಕೃಷ್ಣಮಠ ಆಡಳಿತವು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.