ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ 196 ಬಿಎಸ್‌ಎನ್‌ಎಲ್ ಟವರ್‌ಗಳಿದ್ದು, ಇತ್ತೀಚೆಗೆ 39 ಹೊಸ 4ಜಿ ಟವರ್‌ಗಳು ಮಂಜೂರಾಗಿವೆ. ಇದರಲ್ಲಿ 30 ಟವರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 196ಟವರ್‌ಗಳಲ್ಲಿ 115 ಟವರ್‌ಗಳನ್ನು 3ಜಿಯಿಂದ 4ಜಿಗೆ ಪರಿವರ್ತನೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 235 ಟವರ್‌ಗಳು ಸೇವೆಗೆ ಲಭ್ಯ ಇದೆ. ಇನ್ನು 200- 250 ಟವರ್‌ಗಳು ಬೇಕಾಗಿದ್ದು, ಈ ಬಗ್ಗೆ ಪಟ್ಟಿ ಮಾಡಿ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಬಿಎಸ್‌ಎನ್‌ಎಲ್ ಟವರ್ ಕಾರ್ಯ ಧಕ್ಷತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಬಿಎಸ್‌ಎನ್‌ಎಲ್ ಗ್ರಾಹಕರ ಹಿತರಕ್ಷಣೆಗೆ ಸಂಬಂಧಪಟ್ಟಂತೆ ಉಡುಪಿ ನಗರದಲ್ಲಿರುವ ಬಿಎಸ್‌ಎನ್‌ಎಲ್ ಮುಖ್ಯ ಕಚೇರಿಯಲ್ಲಿ ಕರೆದ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಖಾಸಗಿ ನೆಟ್‌ವರ್ಕ್ ಸಂಸ್ಥೆಗಳ 500-600 ಟವರ್‌ಗಳಿದ್ದು, ಅವರ ರೀತಿಯಲ್ಲಿ ಸೇವೆ ನೀಡಬೇಕಾದರೆ ಬಿಎಸ್‌ಎನ್‌ಎಲ್ ಟವರ್‌ಗಳ ಈಗಿರುವ 235 ಸಂಖ್ಯೆಯನ್ನು 500ರವರೆಗೆ ಹೆಚ್ಚಿಸಬೇಕಾಗಿದೆ. ಈ ಸಂಬಂಧ ಅಧಿಕಾರಿಗಳು ಪಟ್ಟಿ ಮಾಡಿಕೊಟ್ಟರೆ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸ ಲಾಗುವುದು ಎಂದು ಅವರು ಹೇಳಿದರು.

ಈ ಹಿಂದೆ ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆಗಳಿದ್ದು, ಇದರಿಂದ ಟವರ್ ಕಾರ್ಯ ಎಸಗುತ್ತಿರಲಿಲ್ಲ. ಇದೀಗ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಅದೇ ರೀತಿ ಜನರೇಟರ್ ಸಮಸ್ಯೆ ಪರಿಹಾರ ಕಾರ್ಯ ಶೇ.90ರಷ್ಟು ಪ್ರಗತಿಯಲ್ಲಿದೆ. ಹೊಸದಾಗಿ ಬಂದ 4ಜಿ ಟವರ್ ಗಳಿಗೆ ಸೋಲಾರ್ ವ್ಯವಸ್ಥೆ ಇರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಎಂದರು.

ಖಾಸಗಿ ನೆಟ್‌ವರ್ಕ್‌ಗಳಿಗೆ ಸ್ಪರ್ಧೆ ಕೊಡುವ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲು ಯೋಜನೆ ರೂಪಿಸಲಾಗುವುದು. ಇಂಟರ್‌ನೆಟ್ ಸೇರಿದಂತೆ ವಿವಿಧ ಸೇವೆಗಳನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ಮುಂದಿನ ಮೇ 10ರೊಳಗೆ ಮತ್ತೆ ಸಭೆ ಕರೆಯಲಾಗುವುದು ಎಂದು ಸಂಸದರು ತಿಳಿಸಿದರು.

ಸಾಲಿಗ್ರಾಮ ಮತ್ತು ಸಾಸ್ತಾನ ನೆಟ್‌ವರ್ಕ್ ಸಮಸ್ಯೆ, ಜಾತ್ರೆಗಳಲ್ಲಿ ಬಿಎಸ್‌ಎನ್‌ಎಲ್ ಬಗ್ಗೆ ಪ್ರಚಾರ ಪಡಿಸುವ ಕುರಿತ ಅಧಿಕಾರಿಗಳ ನಿರಾಸಕ್ತಿ, ಮಣಿಪಾಲದಂತಹ ಪ್ರಮುಖ ಪಟ್ಟಣದಲ್ಲಿಯೇ ನೆಟ್‌ವರ್ಕ್ ಸಮಸ್ಯೆಗಳಿರುವ ಬಗ್ಗೆ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರು ಸಭೆಯಲ್ಲಿ ಗಮನ ಸೆಳೆದರು.

ಮಣಿಪಾಲ ಮಾಹೆ ಕ್ಯಾಂಪನ್ ಒಳಗೆ ಖಾಸಗಿ ನೆಟ್‌ವರ್ಕ್ ಸಂಸ್ಥೆಗಳಿಗೆ ಟವರ್ ಹಾಕಲು ಅನುಮತಿ ನೀಡುತ್ತಿದ್ದು, ಬಿಎಸ್‌ಎನ್‌ಎಲ್‌ಗೆ ಅವಕಾಶ ನೀಡುತ್ತಿಲ್ಲ. ಇದರಿಂದ ಮಣಿಪಾಲ ಆಸ್ಪತ್ರೆ ಸೇರಿದಂತೆ ಎಲ್ಲೂ ಸರಿಯಾದ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಈ ಕುರಿತು ಮಾಹೆ ಮುಖ್ಯಸ್ಥರಿಗೆ ಪತ್ರ ಬರೆದು ಕೂಡಲೇ ಮಣಿಪಾಲ ಆಸ್ಪತ್ರೆ ಹಾಗೂ ಎಂಐಟಿ ಸೇರಿದಂತೆ ಮೂರು ನಾಲ್ಕು ಕಡೆಗಳಲ್ಲಿ ಟವರ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಬಿಎಸ್‌ಎನ್‌ಎಲ್‌ನ ಜನರಲ್ ಮೆನೆಜರ್ ಹೇಮಂತ್ ಬೊರ್ಲೆ, ಡೆಪ್ಯುಟಿ ಜನರಲ್ ಮೆನೇಜರ್‌ಗಳಾದ ಗೀತಾ ಕುಮಾರಿ, ಕೃಷ್ಣ ಮೊಗೇರ, ಮಮತಾ ಎನ್. ಮೊದಲಾದವರು ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)