ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ಏಕ ವಿನ್ಯಾಸ ನಕ್ಷೆ ಅನುಮೋದನೆಗೆ ಆದೇಶ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ರಘುಪತಿ ಭಟ್ ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾಧಿಕಾರದ ಕಚೇರಿ ಮುಂದೆ ಆರಂಭಿಸಿದ್ದಾರೆ.

ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಜಾಗಕ್ಕೆ ಏಕ ವಿನ್ಯಾಸ ನಕ್ಷೆ ನೀಡುವಂತೆ ರಘುಪತಿ ಭಟ್ 2024ರ ಮಾ.20ರಂದು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅದಕ್ಕೆ ಈವರೆಗೆ ಅನುಮೋದನೆ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಬೆಳಿಗ್ಗೆ 9:30ರಿಂದ ಧರಣಿ ಆರಂಭಿಸಿದ್ದಾರೆ.

ಏಕ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು ಇಲ್ಲವೇ ನೀಡಲು ಆಗುವುದಿಲ್ಲ ಎಂಬುದಾಗಿ ಹಿಂಬರಹ ನೀಡಬೇಕು. ಅಲ್ಲಿಯವರೆಗೆ ಧರಣಿ ಮುಂದುವರಿಸಲಾಗುವುದು. ಹಿಂಬರಹ ನೀಡಿದರೆ ಅದರಂತೆ ಮುಂದೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರಘುಪತಿ ಭಟ್ ಹೇಳಿದರು.

ರಘುಪತಿ ಭಟ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಧಿಕಾರದ ಆಯುಕ್ತ ಮಹೇಶ್ ಜೆ. ಅವರು, ರಘುಪತಿ ಭಟ್ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲ. ಕರಾವಳಿ ಯುವಕ ಮಂಡಲ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಬಡಾನಿಡಿಯೂರು ಏಕನಿವೇಶನಕ್ಕೆ ಅರ್ಜಿ ಬಗ್ಗೆ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಚರ್ಚೆ ಆಗಿದೆ. ಅಂತಿಮ ಹಂತಕ್ಕೆ ಬರಬೇಕು ಎಂಬುದಾಗಿ ನಿರ್ಣಯ ಮಾಡಿದ್ದೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಆದರೂ ಆಯುಕ್ತರು ಕಾನೂನು ಪಾಲನೆ ಮಾಡುತ್ತಿಲ್ಲ ಎಂದು ತಿಳಿಸಿದರು.

View this post on Instagram

A post shared by News Karnataka (@newskarnataka)