ಉಡುಪಿ: ರಾಜ್ಯದ ಜನಸಾಮಾನ್ಯರಿಗೆ, ಗ್ರಾಮೀಣ ಭಾಗದ ಜನರಿಗೆ ಎದುರಾಗುವ ಕಾನೂನು ತೊಡಕು ಗಳನ್ನು ಪರಿಹರಿಸಲು, ಅವರಿಗೆ ಬೇಕಾದ ಕಾನೂನು ನೆರವನ್ನು ನೀಡಲು ಸಹಾಯ ಮಾಡಲು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕ ರನ್ನು (ಪಿಎಲ್ವಿ) ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನರ ಮಧ್ಯೆ, ಪ್ರಾಮಾಣಿಕವಾಗಿ ಕೆಲಸ ಮಾಡಲು ಆಸಕ್ತರಾಗಿರುವ, ಜನರ ಸಮಸ್ಯೆ ಗಳಿಗೆ ಸ್ಪಂದಿಸಲು ನಿಜವಾದ ಕಾಳಜಿ ಹೊಂದಿರುವ ಯಾರು ಕೂಡಾ ಪಿಎಲ್ವಿ ಆಗಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ 50ರಿಂದ 100ಮಂದಿಯನ್ನು ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದಲ್ಲಿ 25ರಿಂದ 50 ಮಂದಿಯನ್ನು ಅರೆಕಾಲಿಕ ಕಾನೂನು ಸ್ವಯಂಸೇವಕರಾಗಿ ನೇಮಿಸಿಕೊಳ್ಳುವ ಯೋಜನೆ ಇದೆ. ಇದಕ್ಕಾಗಿ ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಅವರು ವಿವರಿಸಿದರು.
ಪಿಎಲ್ವಿ ಆಗಲು ಕನಿಷ್ಠ ಅರ್ಹತೆ ಎಸೆಸೆಲ್ಸಿ ತೇರ್ಗಡೆ. ಜನಸೇವೆ ಮಾಡಲು ಪ್ರಾಮಾಣಿಕ ಇಚ್ಛೆ ಹೊಂದಿರುವ ಯಾರೇ ಆಗಲಿ, ಯಾವುದೇ ವೃತ್ತಿಯಲ್ಲಿರಲಿ ಅವರಿಗೆ ಅವಕಾಶವಿದೆ. ನಿವೃತ್ತ ನೌಕರರಿಗೆ, ಜನರ ಮಧ್ಯೆ ಕೆಲಸ ಮಾಡಿದವರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

