ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದ ನಿರ್ಜನ ಪ್ರದೇಶವೊಂದರಲ್ಲಿ ಹಸುವಿನ ರುಂಡ ಪತ್ತೆಯಾಗಿದೆ. ನಗರದ ಹಲವು ದೇವಾಲಯಗಳನ್ನು ಹಾದು ಹೋಗುವ ಪುಣ್ಯ ನದಿ ಪಾಪನಾಶಿನಿ ಮಲೀನವಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಸಮಾಜದ ಸೌಹಾರ್ದ ಕದಡಿಸುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿವೆ.

ಇದು ಪಾಪನಾಶಿನಿ ನದಿ. ಕಾರ್ಕಳದ ಆನೆಕೆರೆಯಲ್ಲಿ ಹುಟ್ಟಿ ಮೂರು ತಾಲೂಕುಗಳನ್ನು ಹಾದು ಸಮುದ್ರ ಸೇರುವ ಪುಣ್ಯ ನದಿ. ಇಂದು ಮುಂಜಾನೆ ನದಿಯ ತೀರ ಪ್ರದೇಶದಲ್ಲಿ ಹಸುವಿನ ರುಂಡ ಪತ್ತೆಯಾಗಿತ್ತು. ಶಿರ್ವ ಗ್ರಾಮದ ಕಲ್ಲೊಟ್ಟು ಎಂಬ ಪರಿಸರದಲ್ಲಿ, ಈ ದುಷ್ಕೃತ್ಯ ಕಂಡುಬಂದಿದೆ. ನೀರಿನ ಮಟ್ಟ ಇಳಿದಿರುವುದರಿಂದ, ಸ್ಪಷ್ಟವಾಗಿ ಹಸುವಿನ ರುಂಡ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.

ತಕ್ಷಣ ಅಲರ್ಟ್ ಆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲವು ಕಾರಣಗಳಿಗೆ ಈ ಘಟನೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿದೆ. ಈ ಪಾಪನಾಶಿನಿ ನದಿ ಹಲವು ದೇವಾಲಯಗಳನ್ನು ಹಾದು ಹೋಗುತ್ತದೆ. ಹಾಗಾಗಿ ಈ ದುಷ್ಕೃತ್ಯ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಶಿರ್ವದ ವಿಷ್ಣುಮೂರ್ತಿ ದೇವಸ್ಥಾನ, ಸೂಡ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ನಾಲ್ಕಾರು ದೇಗುಲಗಳ ವಾರ್ಷಿಕ ಉತ್ಸವದ ವೇಳೆ ಇದೇ ನದಿಯಲ್ಲಿ ಜಳಕ ನಡೆಯುತ್ತದೆ. ಸ್ಥಳೀಯ ಗಣೇಶ್ೋತ್ಸವ ದ ವೇಳೆ ವಿಗ್ರಹವನ್ನು ಇಲ್ಲೇ ಜಲಸ್ಥಂಭನಗೊಳಿಸಲಾಗುತ್ತದೆ. ಹಾಗಾಗಿ ಇದೊಂದು ಅತಿ ಸೂಕ್ಷ್ಮ ವಿಚಾರವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಶಿರ್ವ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪಶುಸಂಗೋಪನ ಇಲಾಖೆಯ ಅಧಿಕಾರಿಗಳನ್ನು ಕರೆಸಿಕೊಂಡು ಮಹಜರು ನಡೆಸಿದ್ದಾರೆ. ಶೀಘ್ರ ಆರೋಪಿಗಳನ್ನು ಪತ್ತೆಹಚ್ಚದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಸಿವೆ.

ಈ ಭಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆಗಳು ಕಾರ್ಯಾಚರಿಸುವ ಬಗ್ಗೆ ಈ ಹಿಂದೆಯೂ ಆರೋಪ ಕೇಳಿಬಂದಿತ್ತು. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕದಿದ್ದರೆ, ಸಮಾಜದ ಸ್ವಾಸ್ಥ್ಯ ಕೆಡುತ್ತೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.