ಉಡುಪಿ: ರಾಜ್ಯದಲ್ಲಿ ಕನ್ನಡ ಭಾಷೆಯೊಂದಿಗೆ ಸುಮಾರು 230 ಸಣ್ಣ ಸಣ್ಣ ಭಾಷೆಗಳಿವೆ. ಇವುಗಳನ್ನು ಉಳಿಸಿ ಬೆಳೆಸುವುದು ಕೂಡಾ ಪ್ರಾಧಿಕಾರದ ಜವಾಬ್ದಾರಿಯಾಗಿದ್ದು, ಈ ಭಾಷೆಗಳ ಸಬಲೀಕರಣಕ್ಕಾಗಿ ಡಾ.ಜಿ.ಎನ್.ದೇವಿ, ಡಾ.ವಿ.ಪಿ.ನಿರಂಜನಾರಾಧ್ಯ ಮುಂತಾದ ವಿದ್ವಾಂಸರ ಸಮಿತಿಯೊಂದಿಗೆ ರಚಿಸಿದ್ದು, ಅದು ಶೀಘ್ರದಲ್ಲೇ ವರದಿಯನ್ನು ನೀಡಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಕನ್ನಡದ ಪ್ರಗತಿ, ಏಳಿಗೆಗಾಗಿ ಕೆಲಸ ಮಾಡುವ ಜೊತೆಗೆ ರಾಜ್ಯದಲ್ಲಿರುವ 230ರಷ್ಟು ಸಣ್ಣ ಭಾಷೆಗಳನ್ನು ಸಹ ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿಯನ್ನು ಹೊಂದಿದೆ.
ತುಳು, ಕೊಡವ, ಕುಂದಾಪುರ ಕನ್ನಡ, ಹವ್ಯಕ, ಅರೆಭಾಷೆ, ಕರಾವಳಿಯ ಸುಮಾರು 2000 ಮಂದಿ ಕೊರಗು ಮಾತನಾಡುವ ಕೊರಗ ಭಾಷೆ, ಕುಂದಾಪುರ ಆಸುಪಾಸಿನಲ್ಲಿ ಇಂದು ಕಣ್ಮರೆಯಾಗಿರುವ ಬೆಳರಿ ಭಾಷೆಗಳಂಥ ಸಣ್ಣ ಭಾಷೆಗಳು ಸಾಯುತ್ತಿರುವಾಗ ಅದು ಸಾಯದಂತೆ ತಡೆಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಸಹ ಆಗಿದೆ ಎಂದರು.

