ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ವೆಹಿಕಲ್ ಓವರ್ ಪಾಸ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಕ್ರಮವಹಿಸಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇವಲ ಕಟಪಾಡಿಯನ್ನೇ ಕೇಂದ್ರವಾಗಿರಿಸಿಕೊಂಡು ಕಾಮ ಗಾರಿಗೆ ಮುಂದಾಗಿರುವುದು ಖಂಡನೀಯ ಎಂದರು. ಅತ್ಯಂತ ಜನನಿಬಿಡ ಪ್ರದೇಶವಾದ ಕಟಪಾಡಿ ಜಂಕ್ಷನ್ 4 ಮುಖ್ಯರಸ್ತೆಗಳನ್ನು ಸಂಪರ್ಕಿಸುವ ಕೇಂದ್ರವಾಗಿದೆ.
ಪ್ರಮುಖವಾಗಿ ಕೋಟೆ, ಕಟಪಾಡಿ, ಕುರ್ಕಾಲು, ಇನ್ನಂಜೆ, ಶಿರ್ವ, ಮಣಿಪುರ, ಅಲೆವೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಸಾರ್ವಜನಿಕರು ವಾಹನ ಗಳ ಮೂಲಕ ಕಟಪಾಡಿಗೆ ತಲುಪಿಯೇ ಮುಂದಿನ ನಿಗದಿತ ಸ್ಥಳಗಳಿಗೆ ಸಂಚರಿಸುವುದರಿಂದ ಸಮಸ್ಯೆಯಾಗಲಿದೆ ಎಂದರು.
ಕಟಪಾಡಿ ಆಸುಪಾಸಿನಲ್ಲಿ ಕಟಪಾಡಿ ವಿಶ್ವನಾಥ ಕ್ಷೇತ್ರ, ವೆಂಕಟರಮಣ ದೇವಸ್ಥಾನ, ಕಟಪಾಡಿ ಚರ್ಚ್ ಮತ್ತು ಮಸೀದಿಗಳು ಇದ್ದು ಅಲ್ಲದೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಪ್ರತಿಷ್ಠಿತ ಕೊರಗಜ್ಜನ ಕ್ಷೇತ್ರ ಹಾಗೂ ಬ್ರಹ್ಮಬೈದೇರುಗಳ ಗರಡಿಗಳಿವೆ. ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿದಿನ ಇಲ್ಲಿ ಸಂಚರಿಸುತ್ತಿದ್ದಾರೆ. ದಿನನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಸಾಕಷ್ಟಿದೆ ಎಂದರು.
ಸಾರ್ವಜನಿಕರಿಗೆ ಉಪಯೋಗವಾಗುವಂತಹ ಓವರ್ ಪಾಸ್ ಕಾಮಗಾರಿಗೆ ಯಾವುದೇ ವಿರೋಧವಿಲ್ಲ. ಆದರೆ, ಈಗ ಸೂಚಿಸಿರುವ ಮಾರ್ಗಗಳಲ್ಲಿಯೇ ಸಂಚಾರ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಪ್ರತಿಭಟನೆಗಳಿಗೆ ಎಲ್ಲರೂ ಜವಾಬ್ದಾರಿಯಾಗಬೇಕಾದ ಪರಿಸ್ಥಿತಿ ಉದ್ಬವಿಸುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಅವರು ಆಗ್ರಹಿಸಿದ್ದಾರೆ.
ಕೋಟೆ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಜತ್ತನ್ನ, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಿರ್ವ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಅಲೆವೂರು ಗ್ರಾಮ ಪಂಚಾಯಿತಿಯ ಯತೀಶ್ ಕುಮಾರ್, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರೇಮ್ ಕುಮಾರ್ ನಿತಿನ್ ಜೆ.ಸಾಲ್ಯಾನ್, ಮಹಮ್ಮದ್ ನಯೀಂ ಕಟಪಾಡಿ, ಕಿರಣ್ ಲೂವಿಸ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಉಪಸ್ಥಿತರಿದ್ದರು.

