ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮೀಪದಲ್ಲಿರುವ ಎತ್ತರದ ತೆಂಗಿನ ಮರವೊಂದು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಮರವು ರಸ್ತೆಯತ್ತ ವಾಲಿಕೊಂಡಿದ್ದು, ಅದರಲ್ಲಿರುವ ಒಣಗಿದ ತೆಂಗಿನಕಾಯಿಗಳು ಹಾಗೂ ಗರಿಗಳು ಆಗಾಗ್ಗೆ ರಸ್ತೆಗೆ ಉದುರುತ್ತಿವೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರು ಆತಂಕ ಎದುರಿಸುವಂತಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಪಾದಚಾರಿಗಳ ಓಡಾಟವೂ ಹೆಚ್ಚಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ಹಲವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಗಾಳಿಯ ವೇಗಕ್ಕೆ ಒಣಗಿದ ಗರಿಗಳು ಅಥವಾ ತೆಂಗಿನಕಾಯಿಗಳು ಕೆಳಗೆ ಬಿದ್ದರೆ ಪಾದಚಾರಿಗಳಿಗೆ ಗಂಭೀರ ಗಾಯವಾಗುವ ಸಾಧ್ಯತೆಯಿದೆ. ವಾಹನ ಸಂಚಾರದ ವೇಳೆ ಇಂತಹ ಘಟನೆ ಸಂಭವಿಸಿದರೆ ಅಪಘಾತಕ್ಕೂ ಕಾರಣವಾಗಬಹುದು.
ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮರದ ಸ್ಥಿತಿಯನ್ನು ಪರಿಶೀಲಿಸಬೇಕು. ಅಪಾಯದ ಸಾಧ್ಯತೆಯಿರುವ ಮರವನ್ನು ನಿಯಮಾನುಸಾರ ತೆರವುಗೊಳಿಸಿ ಸಂಭವನೀಯ ಅನಾಹುತ ತಪ್ಪಿಸಬೇಕು ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.
ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

