ಉಡುಪಿ: ರುಚಿ ರುಚಿಯಾದ ಡ್ರೈ ಫ್ರೂಡ್ಸ್ ಸ್ಮೆಲ್ ತಗೊಂಡ್ರೆ ಸಾಕು ಅಮಲೇರುವಂತೆ ಮಾಡುವ ನಾನಾಬಗೆಯ ಆಲ್ಕೋಹಾಲ್ ಗಳು. ಉಡುಪಿಯಲ್ಲಿ ತಿಂಗಳ ಮೊದಲೇ ಕ್ರಿಸ್ಮಸ್ ತಯಾರಿ ಜೋರಾಗಿದೆ. ಪಾಶ್ಚಾತ್ಯರಲ್ಲೂ ನಮ್ಮಲ್ಲಿರುವಂತೆ ಕೆಲ ಅಪರೂಪದ ಸಂಪ್ರದಾಯಗಳಿವೆ. ಕೃಷಿ ಸಂಸ್ಕೃತಿಯೊಂದಿಗೆ ಬೆರೆತಿರುವ ಒಂದು ಆಚರಣೆ ಇಂಟರೆಸ್ಟಿಂಗ್ ಆಗಿದೆ.

ರಾಶಿ ರಾಶಿ ಡ್ರೈ ಫ್ರೂಡ್ಸ್ ಗುಡ್ಡೆ ಹಾಕಿ, ಅದರ ಮೇಲೆ ಲೀಟರ್ ಗಟ್ಟಲೆ ಆಲ್ಕೋಹಾಲ್ ಸುರಿದು ಕೇಕ್ ಮಿಕ್ಸಿಂಗ್ ಮಾಡಲಾಗುತ್ತದೆ. ಇದೊಂದು ಪಾಶ್ಚಾತ್ಯ ಆಚರಣೆ. ಕ್ರಿಸ್ಮಸ್ ಹಬ್ಬಕ್ಕೆ ಚಪ್ಪರಿಸಲು ಬೇಕಾದ ಕೇಕ್ ತಯಾರಿಗೆ ತಿಂಗಳ ಮೊದಲೇ ಈ ರೀತಿ ತಯಾರಿ ಮಾಡ್ತಾರೆ.

ಉಡುಪಿಯ ರಂಜಿತಾ ಪ್ಯಾಲೇಸ್ ಹೋಟೆಲಿನಲ್ಲಿ ಶನಿವಾರ, ಹೀಗೆ ಒಣಹಣ್ಣು ಹುಳಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯ್ತು. ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಉಡುಪಿ ತನಿಷ್ಕ್ ಜುವೆಲರಿಯ ಮ್ಯಾಕ್ಷಿಮ್ ಸಲ್ಡಾನಾ, ದಾಯ್ಜಿವಲ್ಡ್ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್ ಜೊತೆಯಾಗಿ ಕೆಕ್ ಮಿಕ್ಸಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಹೋಟೆಲಿನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ನಾಯಕ್, ವ್ಯವಸ್ಥಾಪಕ ಮನೋಜ್ ಪೂಜಾರಿ, ಎಫ್ & ಬಿ ವ್ಯವಸ್ಥಾಪಕ ಪ್ರಮೋದ್ ಪೂಜಾರಿ, ಎಕ್ಸಿಕ್ಯೂಟಿವ್ ಶೆಫ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಫ್ರೂಡ್ಸ್ಗೆ ರಮ್, ವಿಸ್ಕಿ, ಬ್ಲಾಕ್ ವೈನ್, ರೆಡ್ ವೈನ್, ಬಗೆಬಗೆಯ ಜ್ಯೂಸ್ಗಳನ್ನು ಸುರಿಯಲಾಯ್ತು. ಕಲಸಿಟ್ಟು ಹದ ಮಾಡಲಾದ ಮಿಶ್ರಣವನ್ನು ಮುಚ್ಚಿ ಪೆಟ್ಟಿಗೆಯೊಳಗೆ ಇರಿಸಲಾಯ್ತು. ತಿಂಗಳ ಬಳಿಕ ಈ ಹುಳಿಯಾದ ಮಿಕ್ಸ್ ಬಳಸಿ ರುಚಿರುಚಿಯಾದ ಕೇಕ್ ತಯಾರಿಸಲಾಗುತ್ತೆ. ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ತೆನೆ ಕಟಾವಿನ ಸೀಸನ್ ಕಳೆದ ನಂತ್ರ ಈ ಅಪರೂಪದ ಸಂಪ್ರದಾಯ ಪಾಲಿಸಲಾಗುತ್ತೆ. ಕ್ರಿಸ್ಮಸ್ ಹಬ್ಬಕ್ಕೆ ಬೇಕಾದ ಕೇಕ್ ಗೆ ತಯಾರಿ ನಡೆಸೋದು ಈ ಆಚರಣೆಯ ಉದ್ದೇಶ.

ಬ್ರಿಟೀಷರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ವೈನ್ ಮತ್ತು ರಮ್ ಬೆರೆಸಿದ ಈ ಮಿಶ್ರಣದಿಂದ ಲಕ್ಷಾಂತರ ಮೌಲ್ಯದ ಕೇಕ್ ಸಿದ್ದವಾಗುತ್ತೆ. ಇದರಿಂದ ತಯಾರಾದ ಕೇಕ್ನಲ್ಲಿ ಏನೋ ಒಂದು ಕಿಕ್ ಇರುತ್ತೆ. ಮಣಿಪಾಲದಲ್ಲಿ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರತಿ ಹಬ್ಬಕ್ಕೂ ಅದರದೇ ಆದ ಸಂಪ್ರದಾಯವಿದೆ. ಹಿನ್ನಲೆಯಿದೆ. ಆಚರಿಸುವ ರೀತಿಯಲ್ಲಿ ವೈವಿಧ್ಯತೆ  ಇದೆ.