ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಸುಬ್ರಹ್ಮಣ್ಯ ಷಷ್ಠಿ ಶ್ರದ್ಧೆ ಭಕ್ತಿಯಿಂದ ನೆರವೇರಿತು. ಷಷ್ಠಿ ಅಂಗವಾಗಿ ನಾಗಬನ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಚಂಪಾ ಷಷ್ಠಿ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

ಕುಕ್ಕಿಕಟ್ಟೆಯ ಮುಚ್ಲಕೋಡು ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ದೇವರ ಪೂಜೆ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ರಥಸಂಪ್ರೋಕ್ಷಣೆ, ರಥಾರೋಹಣ ನಡೆಯಿತು. ಸುಬ್ರಹ್ಮಣ್ಯ ದೇವರಿಗೆ ಆರು ಮುಖ (ಷಣ್ಮುಖ) ಇರುವುದರಿಂದ ಆರು ಎಲೆಗಳಲ್ಲಿ ನೈವೇದ್ಯ ಹಾಗೂ ಅಷ್ಟ ದಿಕ್ಪಾಲಕರಿಗೆ ನೈವೇದ್ಯಗಳನ್ನು ಸಮರ್ಪಿಸಲಾಯಿತು.
ಕುಂಜಿಬೆಟ್ಟುವಿನ ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ನಾಗದೇವರಿಗೆ ವಿಶೇಷ ಅಭಿಷೇಕ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಅನ್ನಸಂತರ್ಪಣೆಯಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು.

ಬಡಗುಪೇಟೆಯ ವಾಸುಕಿ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಆಶ್ಲೇಷ ಬಲಿ ಸೇವೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ ನೆರವೇರಿತು. ಉಡುಪಿಯ ಪ್ರಾಚೀನ ಸ್ಕಂದಾಲಯಗಳಲ್ಲಿ ಒಂದಾಗಿರುವ ತಾಂಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಅಭಿಷೇಕ ನಡೆಯಿತು.

