ಉಡುಪಿ: ಭಾರತೀಯ ಸೇನೆ ನಡೆಸಿರುವ’ಆಪರೇಷನ್ ಸಿಂಧೂರ್’ಗೆ ಬೆಂಬಲವಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೇತೃತ್ವದಲ್ಲಿ 21 ಅಡಿ ಉದ್ದ ಹಾಗೂ 14 ಅಡಿ ಅಗಲದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು.

ಉಡುಪಿ ಚಿತ್ತರಂಜನ್ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮಾರುತಿ ವೀಥಿಕಾ ವೃತ್ತದವರೆಗೆ ಸಾಗಿ, ಬಳಿಕ ಅದೇ ರಸ್ತೆಯಲ್ಲಿ ಹಿಂದಿರುಗಿ ಚಿತ್ತರಂಜನ್ ಸರ್ಕಲ್ ನಲ್ಲಿ ಮುಕ್ತಾಯಗೊಂಡಿತು. ಸಂಭ್ರಮಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಭಾರತ ಸರ್ಕಾರವು ‘ಆಪರೇಷನ್ ಸಿಂಧೂರ್’ನೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ತ್ರಿವರ್ಣ ಧ್ವಜದ ಮೆರವಣಿಗೆಯೊಂದಿಗೆ ನಮ್ಮ ಭಾರತೀಯ ಸೇನೆಯನ್ನು ಗೌರವಿಸುವ ಮೂಲಕ ನಾವು ಸಂಭ್ರಮಾಚರಿಸುತ್ತಿದ್ದೇವೆ.

ಧ್ವಜಕ್ಕೆ ಪುಷ್ಪಗಳನ್ನು ಅರ್ಪಿಸಿ, ದೇಶಭಕ್ತಿಯ ಘೋಷಣೆಗಳನ್ನು ಕೂಗಲಾಯಿತು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು. ಈ ಮೆರವಣಿಗೆಯಲ್ಲಿ ಬಳಸಲಾದ ಧ್ವಜವು ದೇಶದ ಅತಿದೊಡ್ಡ ಧ್ವಜಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಿತ್ರ ಸ್ಕೂಲ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವಿನಾಯಕ್ ಹೆಗ್ಡೆ, ಸುಧಾಕರ್, ರಾಜೇಶ್ ಶೇಟ್, ತಾರಾನಾಥ್ ಮೇಸ್ತಾ ಮೊದಲಾದವರು ಭಾಗವಹಿಸಿದ್ದರು.