ಉಡುಪಿ: ಬಿಜೆಪಿ ಭದ್ರಕೋಟೆಗಳಲ್ಲಿರುವ ಶಾಸಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಆರೋಪಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಇದೀಗ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧವೂ ದೂರು ದಾಖಲಿಸಿರುವುದು ಇದೇ ಧೋರಣೆಯ ಮುಂದುವರಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಉದ್ದೇಶದಿಂದಲೇ ಬಿಜೆಪಿ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇಂತಹ ಪ್ರಕರಣಗಳಿಗೆ ಬಿಜೆಪಿ ಹೆದರುವುದಿಲ್ಲ. ಇತ್ತೀಚೆಗೆ ಬಿಜೆಪಿ ಮುಖಂಡ ಸಿ.ಟಿ. ರವಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೇ ಹಲವು ಪ್ರಕರಣಗಳಿವೆ. ಅವುಗಳನ್ನು ಪರಿಶೀಲಿಸಿದರೆ ಅವರ ಮೇಲೆಯೇ ರೌಡಿಶೀಟರ್ ತೆರೆಯಬೇಕಾದ ಪರಿಸ್ಥಿತಿ ಇದೆ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕರು ದೇಶದ ಭದ್ರತೆ ಮತ್ತು ರಾಷ್ಟ್ರೀಯ ವಿಚಾರಗಳಲ್ಲಿ ತಪ್ಪು ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಪಾಕಿಸ್ತಾನವನ್ನು ಶತ್ರು ರಾಷ್ಟ್ರವಲ್ಲ ಎಂದು ಹೇಳಿರುವುದು ಆ ಪಕ್ಷದ ಮನೋಭಾವವನ್ನು ತೋರಿಸುತ್ತದೆ. ಪ್ರಿಯಾಂಕ್ ಖರ್ಗೆ ಪ್ರತಿದಿನ ಆರ್‌ಎಸ್‌ಎಸ್ ವಿರುದ್ಧವೇ ಮಾತನಾಡುತ್ತಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಿದ್ದರೂ ಅವರ ಮೇಲೆ ಒತ್ತಡ ಹೇರಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಾಂಗ್ರೆಸ್ ಶಾಸಕರು ಏನೇ ಹೇಳಿದರೂ ಅವರ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ ಎಂದು ದೂರಿದರು.

ಈ ಎಲ್ಲ ಪ್ರಕರಣಗಳನ್ನು ಬಿಜೆಪಿ ಕಾನೂನುಬದ್ಧವಾಗಿ ಎದುರಿಸಲಿದೆ. ಸದನದ ಒಳಗೂ ಹೊರಗೂ ಹೋರಾಟ ಮುಂದುವರಿಸಲಾಗುವುದು ಎಂದು ಭರತ್ ಶೆಟ್ಟಿ ಹೇಳಿದರು.