ಉಡುಪಿ: ಬಿಪಿಎಲ್‌ ಪಡಿತರ ಚೀಟಿಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೂಕ್ತ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘7.59 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರದ ಸೂಚನೆಯಂತೆ ಈಗಾಗಲೇ ಅಂದಾಜು ನಾಲ್ಕು ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಆದರೆ, ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಇಲಾಖೆಗೆ ಸೂಚಿಸಿದ್ದೇನೆ.

ಸದ್ಯಕ್ಕೆ ಯಾವುದೇ ಕಾರ್ಡ್‌ ರದ್ದು ಮಾಡದಂತೆ ನಿರ್ದೇಶನ ನೀಡಲಾಗಿದೆ. ಅಂದಾಜು 3.5 ಲಕ್ಷ ಕಾರ್ಡ್‌ಗಳ ರದ್ದತಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ’ ಎಂದು ಅವರು ತಿಳಿಸಿದರು. ಕಾರ್ಡ್‌ಗಳ ರದ್ದತಿ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಮುಂದಿನ ಕ್ರಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಪಡಿತರ ಚೀಟಿಗೆ ಕೆವೈಸಿ ಮಾಡಿಸಿ ಐದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಮತ್ತೆ ಕೆವೈಸಿ ಮಾಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಸುಮಾರು ಎರಡು ಕೋಟಿ 59 ಲಕ್ಷ ಪಡಿತರ ಚೀಟಿಗಳಿಗೆ ಮರು ಕೆವೈಸಿ ಮಾಡಬೇಕಿದೆ ಎಂದು ಸಚಿವರು ತಿಳಿಸಿದರು.

‘ಮರಣ ಹೊಂದಿರುವವರು, ಬಡತನ ರೇಖೆಗಿಂತ ಮೇಲಿರುವವರು ಅಥವಾ ಪಡಿತರ ಚೀಟಿ ಅಗತ್ಯವಿಲ್ಲದವರು ಇದ್ದಲ್ಲಿ ಈ ಪ್ರಕ್ರಿಯೆಯಿಂದ ನಿಖರ ಮಾಹಿತಿ ಲಭ್ಯವಾಗಲಿದೆ. ಸೆಪ್ಟೆಂಬರ್ 31ರೊಳಗೆ ಕೆವೈಸಿ ಮಾಡಿಸಿಕೊಳ್ಳಬೇಕು’ ಎಂದರು.

ಹೊಸ ಬಿಪಿಎಲ್‌ ಕಾರ್ಡ್‌ ಬಗ್ಗೆ ಚರ್ಚೆ
ಹೊಸ ಬಿಪಿಎಲ್‌ ಕಾರ್ಡ್‌ ವಿತರಣೆಯ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ತಾನು ನಿನ್ನೆಯಷ್ಟೇ ಇಲಾಖೆಯ ಪ್ರಭಾರ ವಹಿಸಿಕೊಂಡಿದ್ದು, ಈ ಕುರಿತು ಪರಿಶೀಲನೆ ನಡೆಸುವುದಾಗಿ ರಿಜ್ವಾನ್ ಅರ್ಷದ್ ಹೇಳಿದರು.

ಕರಾವಳಿಗೆ ಕುಚ್ಚಲಕ್ಕಿ ನೀಡುವ ಬಗ್ಗೆ ಗಮನ
ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿಗೆ ಇರುವ ಬೇಡಿಕೆಯ ಬಗ್ಗೆಯೂ ಗಮನ ಹರಿಸಲಾಗುವುದು. ‘ಆಯಾ ಪ್ರದೇಶಗಳಿಗೆ ಅನುಗುಣವಾಗಿ ಪಡಿತರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲೂ ಕುಚ್ಚಲಕ್ಕಿ ನೀಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ಗಮನ ಹರಿಸುತ್ತೇನೆ’ ಎಂದು ಸಚಿವರು ಹೇಳಿದರು.