ಉಡುಪಿ: ಮಳೆಗಾಲ ಆರಂಭವಾಯ್ತು ಅಂದ್ರೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಜನಕ್ಕೆ ಚಳಿಜ್ವರ ಬರುತ್ತದೆ. ನದಿ ತೊರೆ ಕಾಲುವೆ ತೋಡುಗಳನ್ನು ದಾಟಿ ಓಡಾಡಬೇಕಾದ ಸ್ಥಿತಿ ಎದುರಾಗುತ್ತದೆ. ಶತಮಾನದಿಂದ ಕಾಡುವ ಕಷ್ಟಕ್ಕೊಂದು ಪರಿಹಾರ ಸಿಗುವ ಲಕ್ಷಣ ಕಾಣಿಸಿದೆ. ಶಾಸಕ ಗುರುರಾಜ್ ಗಂಟಿಹೊಳೆ- ಅರುಣಾಚಲಂ ಟ್ರಸ್ಟ್ ಜಂಟಿ ಯೋಜನೆಯಿಂದ ಲಾರಿಗಳ ಚಾಸ್ಸೀ ಮತ್ತು ಬಿಡಿಭಾಗಗಳನ್ನು ಜೋಡಿಸಿ ಸಣ್ಣ ಬ್ರಿಡ್ಜ್ ಮಾಡಲಾಗಿದೆ.

ಮಳೆಗಾಲದಲ್ಲಿ ನದಿ ತೊರೆ ಕಾಲುವೆ ದಾಟೋದೇ ದೊಡ್ಡ ಅಪಾಯದ ಸಂಗತಿ. ಅನೇಕ ವರ್ಷಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ಗ್ರಾಮೀಣ ಪ್ರದೇಶದ ಜನರಿಗಿದೆ. ಉಡುಪಿ ಜಿಲ್ಲೆಯಲ್ಲೆ ಅತಿ ಹೆಚ್ಚು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಬೈಂದೂರು ತಾಲೂಕಿನಲ್ಲಿ ಮಳೆಗಾಲ ಬಂತೆಂದರೇ ಬದುಕು ದುಸ್ಥರ.

ನೂರಾರು ನದಿ ತೊರೆಗಳು ತುಂಬಿ ಹರಿದು ದ್ವೀಪದಂತಾಗುತ್ತೇ. ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳಲ್ಲಿ ಇಂದಿಗೂ ನೂರಾರು ಮರದ ಕಾಲು ಸಂಕಗಳ‌ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಮಾಡಬೇಕಿದೆ. ಮಕ್ಕಳು ಶಾಲೆಗೆ ಹೋಗುವುದು, ಹಿರಿಯರು ಕೆಲಸಕ್ಕೆ ಹೋಗಲು ದುರ್ಗಮ ಮರದ ಕಾಲು ಸಂಕಗಳನ್ನೆ ಅವಲಂಭಿಸಬೇಕಿದೆ. ಈ‌ ಹಿಂದೆ ಸಾವು ನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿದ್ರೂ‌ ಸರ್ಕಾರಕ್ಕೆ ಗ್ರಾಮೀಣ ಜನರ ಜೀವನಕ್ಕೆ ಭಧ್ರತೆ ಕೊಡಲು ಇಂದಿಗೂ ಸಾಧ್ಯವಾಗಿಲ್ಲ.

ರಾಜ್ಯ ಆಡಳಿತ ಸರ್ಕಾರ ಗ್ಯಾರಂಟಿ ಅನುಷ್ಠಾನದಲ್ಲೇ ಬಿಜಿಯಾಗಿರುವ ಸಂದರ್ಭದಲ್ಲಿ ಸರ್ಕಾರದ ಅನುದಾನ, ಯೋಜನೆಗಳಿಗೆ ಕಾಯುತ್ತಾ ಕೂರದೆ, ಖಾಸಗಿ ಸಹಭಾಗಿತ್ವದಲ್ಲಿ ಗ್ರಾಮೀಣ ಜನರ ನೋವಿಗೆ ಸ್ಪಂದಿಸುವ ಕಾರ್ಯ ಬೈಂದೂರಿನಲ್ಲಿ ನಡೆಯುತ್ತಿದೆ. ಅಪಾಯಕಾರಿ ಮರದ ಕಾಲು ಸಂಕಗಳ‌ ಬದಲಿಗೆ ಲಾರಿ ಬಸ್ಸುಗಳ ಚಾಸ್ಸಿಗಳ ಬಿಡಿ ಭಾಗಗಳನ್ನು ಬಳಸಿ ಗಟ್ಟಿ ಮುಟ್ಟಾದ ಕಾಲುಸಂಕಗಳನ್ನು ನಿರ್ಮಿಸಿ ಕೊಡಲು ಖಾಸಗಿ ಸಂಸ್ಥೆ ಮುಂದಾಗಿದೆ.

ಅರುಣಾಚಲಂ ಟ್ರಸ್ಟ್ ನಿಂದ 50 ಬ್ರಿಡ್ಜ್ ರಚನೆಗೆ ಒಪ್ಪಿಗೆ ದೊರೆತ್ತಿದ್ದು, ಈಗಾಗಲೇ ಹೊಸಂಗಡಿ ಗ್ರಾಮದಲ್ಲಿ ರಚನೆಯಾದ ಹೊಸ ಸಂಕವನ್ನು ಜನರ ಬಳಕೆಗೆ ಅನೂಕುಲಮಾಡಿಕೊಡಲಾಗಿದೆ. ಒಟ್ಟು ಈ ಬಾರಿ ಹೊಸದಾಗಿ ಮೂರು ಬ್ರಿಜ್ ನಿರ್ಮಾಣ ಮಾಡಲಾಗಿದ್ದು, ಪಶ್ಚಿಮ ಘಟ್ಟದ ತಪ್ಪಲಿನ ಮೂಲೆ ಮೂಲೆಗೂ ಬ್ರಿಜ್ ಕಟ್ಟುವ ಕನಸುನ್ನು ಅರುಣಾಚಲಂ ಸಂಸ್ಥೆ ಮುಂದೆ ಬಂದಿದೆ.

ಸಣ್ಣ ಸಣ್ಣ ಕಾಲು ಸಂಕಗಳಿಂದ ಹಳ್ಳಿ ಜನರಿಗೆ ನೆಮ್ಮದಿ ಪಡುವಂತಾಗಿದ್ದು, ಇನ್ನೂ ತಾಲೂಕಿನಲ್ಲಿ ಅನೇಕ ಮರದ ಕಾಲುಸಂಕಗಳಿದ್ದು ಭಯದಲ್ಲೇ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ಅನುಕೂಲವಾಗುವಂತೆ ಖಾಸಗಿ ಸಂಸ್ಥೆಗಳು ಮುಂದೆ ಬಂದಿದೆ. ಸರ್ಕಾರದ ಯೋಜನೆಗಳಿಗೆ ಕಾಯದೆ ಇಚ್ಛಾಶಕ್ತಿ ಇದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದ್ದಾಗಿದೆ.

ಬೈಂದೂರು ಭಾಗದ ಹೊಸಂಗಡಿ ಭಾಗದ ಮಂದಿ ಈ ಮಳೆಗಾಲದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜನ ಜಾನುವಾರು ಹೊಸ ಕಾಲುಸಂಕದಲ್ಲಿ ಓಡಾಡಲು ಶುರುಮಾಡಿದ್ದಾರೆ. ಪೂರ್ತಿಯಾಗಿ ಸರಕಾರವನ್ನು ಅವಲಂಬಿಸುವ ಬದಲು, ಈ ಮೂಲಕ ದಾನಿಗಳ ಸಹಾಯ ಗ್ರಾಮೀಣ ಜನಕ್ಕೆ ಸಿಕ್ಕಿದಂತಾಗಿದೆ.