ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಸೌಪರ್ಣಿಕಾ ನದಿ ಕೂಡ ಉಕ್ಕಿ ಹರಿಯುತ್ತಿದ್ದು, ಸೇತುವೆ ಇಲ್ಲದೆ ಪರದಾಡುತ್ತಿರುವ ಜನರಿಗೆ ಮಹಿಳೆಯೊಬ್ಬರು ಆಸರೆಯಾಗಿದ್ದಾರೆ.
ಹೌದು, ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಸೇತುವೆ ಇಲ್ಲದೆ ಊರಿನವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಗ್ರಾಮಸ್ಥರಿಗೆ ಮರವಂತೆಯಿಂದ ನಡುಪಡುಕೋಣೆಗೆ ತೆರಳಲು ಸೌಪರ್ಣಿಕಾ ನದಿ ದಾಟಬೇಕಾದ ಅನಿವಾರ್ಯತೆ ಇದೆ. ಸೌಪರ್ಣಿಕಾ ನದಿಗೆ ಸೇತುವೆ ನಿರ್ಮಿಸುವಂತೆ ಊರಿನವರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಆದರೆ ಜನರ ದಶಕಗಳ ಹೋರಾಟಕ್ಕೆ ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಮೌನವಾಗಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಫಲ ಸಿಕ್ಕಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬರು ಆಸರೆಯಾಗಿ ನಿಂತಿದ್ದಾರೆ. ಇವರು ಊರಿನವರ ಹೊರ ಜಗತ್ತಿನ ಸಂಪರ್ಕ ಕೊಂಡಿಯಾಗಿದ್ದಾರೆ.
ಪ್ರತಿದಿನ ನದಿಯಲ್ಲಿ ದೋಣಿ ನಡೆಸಿ ಮಕ್ಕಳನ್ನು ದಾಟಿಸುವ ಕಾಯಕ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಸೌಪರ್ಣಿಕಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇಂತಹ ಅಪಾಯದ ಸಂದರ್ಭದಲ್ಲಿಯೂ ಈ ಮಹಿಳೆ ತನ್ನ ಜೀವದ ಹಂಗು ತೊರೆದು ಊರಿನವರನ್ನು ನದಿ ದಾಟಿಸುತ್ತಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು, ಊರವರ ಹೊರಜಗತ್ತಿನ ಸಂಪರ್ಕಕ್ಕೆ ಮಹಿಳೆ ನೆರವಾಗಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಭಾಗದ ಜನರ ಸಂಕಷ್ಟಕ್ಕೆ ಮಿಡಿಯಬೇಕು. ಆದಷ್ಟು ಬೇಗ ಸೇತುವೆ ನಿರ್ಮಾಣ ಮಾಡಿ ಊರಿನವರ ಸಮಸ್ಯೆ ಬಗೆಹರಿಸಬೇಕಾಗಿದೆ.

