ಉಡುಪಿ: ಉಡುಪಿ ನಗರದ ಹೃದಯಭಾಗದಲ್ಲಿರುವ ಬ್ರಹ್ಮಗಿರಿ ನಾಯರ್ ಕೆರೆಗೆ ಮರುಜೀವ ನೀಡಲಾಗುತ್ತಿದೆ. ಐತಿಹಾಸಿಕ ಹಿನ್ನಲೆಯುಳ್ಳ ನಾಯರ್ ಕೆರೆ, ಹದಿಮೂರು ವರ್ಷಗಳಿಂದ ಕಳೆಗುಂದಿತ್ತು.

ಕೆರೆಯ ಸ್ವಚ್ಚತೆಗೆ ಬಹಳ ವರ್ಷಗಳಿಂದ ಬೇಡಿಕೆಯಿದ್ದ ಹಿನ್ನಲೆ ನಗರಸಭೆ ಕೊನೆಗೂ ಕಾಯಕಲ್ಪ ನೀಡಿದೆ. ಅಂತರ್ಜಲ ವೃದ್ಧಿಗಾಗಿ ಮತ್ತು ಶುಚಿತ್ವ ಸಾಂಕ್ರಾಮಿಕ ರೋಗಗಳು ಹರಡದಂತೆ ಕೆರೆಯ ಹೂಳು ತೆಗೆದು ಮರುಜೀವ ಕೊಡುವ ಕೆಲಸ ನಡೆಯುತ್ತಿದೆ.

ಬ್ರಹ್ಮಗಿರಿ, ನಾಯರ್ ಕೆರೆ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳ ಬಳಕೆಗೆ ರಚಿಸಿದ್ದ ಕೆರೆ, ದಿನ ಉರುಳಿದಂತೆ ಕಳೆಗುಂದಿತ್ತು. ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಬಹಳಷ್ಟು ಯುವಕರು, ಮಕ್ಕಳು ಈಜಾಡುತ್ತಿದ್ದ ಕೆರೆ ದಿನಹೋದಂತೆ ಹೂಳು ತುಂಬಿಕೊಂಡಿತ್ತು.

ಈಜುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿತ್ತು. ತದನಂತರದಲ್ಲಿ ಹೂಳು ತುಂಬಿದ ಪಾಳುಬಿದ್ದ ಕೆರೆಯಾಗಿತ್ತು. ಸೊಳ್ಳೆ ಉತ್ಪತ್ತಿ ತಾಣವೂ ಆಗಿತ್ತು. ಸ್ಥಳೀಯ ನಿವಾಸಿಗಳ ಹಲವು ಮನವಿ ಬಳಿಕ ಕೆರೆಯ ಹೂಳು ತೆಗೆದು ಮರುಜೀವ ನೀಡುವ ಕೆಲಸ ಭರದಿಂದ ಸಾಗಿದೆ.