ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮಂಡಿಸಿದ ಬಜೆಟ್ ಕರಾವಳಿ ಜನತೆಯ ಪಾಲಿಗೆ ಕರಾಳ ಬಜೆಟ್ ಆಗಿದ್ದು, ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು, ಜಿಲ್ಲೆಯ ನಿರಂತರ ಕಡೆಗಣನೆ ಮುಂದುವರಿದಿದೆ. ಇದರ ವಿರುದ್ಧ ಉಡುಪಿ ನಗರ ಬಿಜೆಪಿ ವತಿಯಿಂದ ಉಡುಪಿ ಹಳೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾರ್ಚ್ 14 ರಂದು ಸಂಜೆ 4.30ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಹೇಳಿದರು.

ಉಡುಪಿಯಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಉಡುಪಿ ಶಾಸಕರ ಕಚೇರಿಯಿಂದ ಹಳೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಒಂದು ಸಾವಿರಕ್ಕೂ ಅಧಿಕ‌ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪ್ರಸ್ತುತ ಸಾಲಿನ ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಸರ್ಕಾರವು ಜಿಲ್ಲೆಯ ಅಭಿವೃದ್ಧಿಯನ್ನು ತೀವ್ರವಾಗಿ ಕಡೆಗಣಿಸಿದೆ. ಕರಾವಳಿ ಭಾಗದ ಜನರು ಆರೋಗ್ಯ, ಶಿಕ್ಷಣ. ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರೂ, ಈ ಬಾರಿ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಗಳು ಅಥವಾ ಮಹತ್ವದ ಅನುದಾನ ಘೋಷಣೆ ಆಗದಿರುವುದು ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಅಸ್ತಿತ್ವವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆತಿದ್ದು, ಉಡುಪಿ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆಗಳಾದ ಜಿಲ್ಲಾಸ್ಪತ್ರೆ ಕಾಮಗಾರಿ, ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ನೂತನ ವಿದ್ಯಾರ್ಥಿನಿಲಯಗಳ ಮಂಜೂರಾತಿ. ಕೃಷಿ ಡಿಗ್ರಿ ಕಾಲೇಜು ಆರಂಭಿಸುವುದು. ಕರಾವಳಿಗೆ ಪ್ರತ್ಯೇಕ ಮರಳು ನೀತಿ, ನೀರಾವರಿ ಯೋಜನೆಗಳು, ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳು, ಸರಕಾರಿ ಬಸ್ ವ್ಯವಸ್ಥೆ ಸದೃಢ ಪಡಿಸುವುದು,

ಪ್ರವಾಸೋದ್ಯಮಕ್ಕೆ ಉತ್ತೇಜನ, ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣ. ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ವಿಶೇಷ ಅನುದಾನ ಮೀಸಲಿರಿಸುವುದೂ ಸೇರಿದಂತೆ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಸರ್ಕಾರದಿಂದ ಯಾವುದೇ ಅನುದಾನ ಘೋಷಣೆ ಆಗದಿರುವುದು ತೀವ್ರ ಅನ್ಯಾಯವಾಗಿದ್ದು, ಜಿಲ್ಲೆಯ ಜನತೆಯ ನಿರೀಕ್ಷೆಗೆ ಈ ಬಾರಿಯ ಬಜೆಟ್ ನಲ್ಲಿ ತಣ್ಣೀರು ಎರಚಿದಂತಾಗಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಿರಣ್ ಕುಮಾರ್, ಪ್ರಭಾಕರ ಪೂಜಾರಿ, ದಿವಾಕರ ಶೆಟ್ಟಿ, ಶ್ರೀವತ್ಸ, ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)