ಉಡುಪಿ: ಸಚಿವ ಜಮೀರ್‌ ಅಹ್ಮದ್‌ ಖಾನ್ ಅವರು ಧ್ವಜಾರೋಹಣದ ಜವಾಬ್ದಾರಿ ನಿರಾಕರಿಸಿದ್ದಾರೆ ಎಂಬ ಬಿಜೆಪಿ ಟೀಕೆಗೆ ಆಹಾರ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದ್ದು, ಈ ವಿಚಾರದಲ್ಲಿ ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”52 ವರ್ಷಗಳ ಕಾಲ ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ ಮಾಡಿರಲಿಲ್ಲ. ಹೀಗಿರುವಾಗ ನಮಗೆ ನೈತಿಕ ಬೋಧನೆ ಮಾಡುವ ಅಗತ್ಯವಿಲ್ಲ” ಎಂದರು.

ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಧ್ವಜ ಎತ್ತಿ ಹೋರಾಡಿದೆ. ಅದೇ ರಕ್ತ ನಮ್ಮ ದೇಹದಲ್ಲೂ ಹರಿಯುತ್ತಿದೆ ಎಂದು ಅವರು ಹೇಳಿದರು. ಜಮೀರ್‌ ಅಹ್ಮದ್‌ ಅವರು ಉಸ್ತುವಾರಿ ಸಚಿವರ ಜವಾಬ್ದಾರಿ ಬೇಡ ಎಂದು ಹೇಳಿದ್ದಾರೆ. ಉಸ್ತುವಾರಿ ಜವಾಬ್ದಾರಿ ಬೇಡವೆಂದಿರುವ ಹಿನ್ನೆಲೆಯಲ್ಲಿ ಧ್ವಜಾರೋಹಣದ ಜವಾಬ್ದಾರಿಯೂ ಬೇಡ ಎಂದು ತಿಳಿಸಿದ್ದಾರೆ. ತಮ್ಮ ಬಳಿ ಬೇರೆ ಜವಾಬ್ದಾರಿಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ ಎಂದರು.

ಜಮೀರ್‌ ಅವರ ಹೇಳಿಕೆ ಕುರಿತು ಹೆಚ್ಚಿನ ಮಾಹಿತಿ ತಮಗೆ ತಿಳಿದಿಲ್ಲ. ತಾನು ಪ್ರವಾಸದಲ್ಲಿದ್ದ ಕಾರಣ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ರಿಜ್ವಾನ್ ಅರ್ಷದ್ ಸ್ಪಷ್ಟಪಡಿಸಿದರು. ಬಿಜೆಪಿ ಟೀಕೆಗೆ ನಾನು ಉತ್ತರಿಸುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಅವರು ಹೇಳಿದರು.