ಉಡುಪಿ: ಭಟ್ಕಳ ಕಪ್ಪೆ ಚಿಪ್ಪು ದುರಂತ ಪ್ರಕರಣ ನಡೆದಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಾದೇವಿ ನಾಯ್ಕ್ ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ನಾವು ನದಿಗೆ ತೆರಳಿದ್ದೇವೆ. ನಮ್ಮ ಕುಟುಂಬದ 13 ಜನ ಮತ್ತು ಪರಿಸರದ ಓರ್ವ ವ್ಯಕ್ತಿ ಸೇರಿ 14 ಜನರ ತಂಡ ನಮ್ಮದಾಗಿತ್ತು. ನಾವು ಕಪ್ಪೆಚಿಪ್ಪನ್ನು ಆಯ್ದು ಹಿಂದಿರುವಾಗ ಏಕಾಯಕಿಯಾಗಿ ನೀರಿನ ಅಬ್ಬರ ಹೆಚ್ಚಾಗಿತ್ತು ಎಂದರು.

ನನ್ನ ಕಣ್ಣ ಮುಂದೆಯೆ ಎಲ್ಲರೂ ನೀರಪಾಲಾಗಿದ್ದರು. ನನಗೆ ಸ್ವಲ್ಪ ಈಜಾಡಲು ತಿಳಿದಿರುವ ಕಾರಣಕ್ಕೆ ದಡಕ್ಕೆ ಬರಲು ಸಾಧ್ಯವಾಗಿದೆ. ಈಜುತ್ತಾ ಸಹಾಯಕ್ಕಾಗಿ ಕೋಗಿಕೊಳ್ಳುತ್ತಿರುವಾಗ ದೋಣಿಯ ಹುಡುಗ ನನ್ನ ಮತ್ತು ನನ್ನ ಜೊತೆಗಿದ್ದವರನ್ನು ರಕ್ಷಣೆ ಮಾಡಿದ. ಮತ್ತೋರ್ವರು ಈಜೀ‌ ದಡ ಸೇರಿದ್ದರು. ಸುನಾಮಿಯ ರೀತಿಯಲ್ಲಿ ನೀರಿನ ಅಬ್ಬರ ಹೆಚ್ಚಾಗಿತ್ತು.

ಈಜಾಡಲು ತಿಳಿದವರಿಗೂ ಸಹ ತಮ್ಮ ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಷ್ಟು ಪ್ರಮಾಣದಲ್ಲಿ ನೀರಿನ ಅಬ್ಬರ ಹೆಚ್ಚಾಗಿತ್ತು. ಕಪ್ಪೆಚಿಪ್ಪನ್ನ ಆಯುವ ಅನುಭವ ಮತ್ತು ನದಿಯ ನೀರಿನ ಬಗ್ಗೆ ಅನುಭವ ನಮಗಿತ್ತು. ಆದರೂ‌ ಈ ದುರ್ಘಟನೆ ಆಗಿಹೋಗಿದೆ. ಹಿಂದೆಂದೂ ಕಾಣದ ರೀತಿಯ ನೀರಿನ ಅಬ್ಬರ ಏಕಾಏಕಾಗಿ ಹೆಚ್ಚಾಗಿತ್ತು. ನಮ್ಮವರನ್ನೆಲ್ಲ ಕಳೆದುಕೊಂಡು ಇದೀಗ ಆಸ್ಪತ್ರೆಯಲ್ಲಿ ಮಲಗುವ ಪರಿಸ್ಥಿತಿ ನನಗೆ ಬಂದಿದೆ ಎಂದರು.