ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 9ರಿಂದ 13ರ ವರೆಗೆ ‘ಭಕ್ತಿ ಸಿದ್ಧಾಂತೋತ್ಸವ – ಶ್ರೀ ರಾಮೋತ್ಸವ’ ಶೀರ್ಷಿಕೆಯಡಿ ವೈಭವದ ಮಹೋತ್ಸವ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯ ಅವರು, ಶ್ರೀ ಪೇಜಾವರ ಮಠ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವ ಮಹಾಮಂಡಲ ಇವುಗಳ ಆಶ್ರಯದಲ್ಲಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ.

ಎ. 10ರಂದು ಶ್ರೀಮನ್ನ್ಯಾಯ ಸುಧಾಮಂಗಲೋತ್ಸವ, ಎ. 11 ಮತ್ತು 12ರಂದು ತತ್ವಜ್ಞಾನ‌ ಸಮ್ಮೇಳನ ನಡೆಯಲಿದ್ದು, ಸುಮಾರು 1800ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಅಲ್ಲದೆ, 25 ಬೇರೆ ಬೇರೆ ಶಾಸ್ತ್ರವಿಷಯಾಧಾರಿತ ವಿದ್ವತ್ ಗೋಷ್ಠಿಗಳು, ಮಹಿಳಾ ಗೋಷ್ಠಿ, ಸಂಗೀತ ಗೋಷ್ಠಿ, ಯುವ ಗೋಷ್ಠಿಗಳು ನಡೆಯಲಿವೆ. ಅಧ್ಯಾತ್ಮಿಕ ಪುಸ್ತಕ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟಿನ ನೂರಾರು ಭಜನಾಮಂಡಳಿಗಳ 2500ಕ್ಕೂ ಅಧಿಕ ಮಾತೆಯರಿಂದ ಹರಿನಾಮ ಸಂಕೀರ್ತನೋತ್ಸವ ಜರುಗಲಿದೆ ಎಂದರು.

ಎ. 13ರಂದು ಸಂಜೆ 3.30 ರಿಂದ 6 ರವರೆಗೆ ಸಂತ ಸಂಗಮ- ಬೃಹತ್ ಹಿಂದು ಸಮಾಜೋತ್ಸವ ನಡೆಯಲಿದ್ದು, ನಾಡಿನ 20 ಕ್ಕೂ ಮಠಾಧೀಶರು, ಸಾಧು ಸಂತರು ಭಾಗವಹಿಸಿ ಶ್ರೀರಾಮಾಯಣಾಧಾರಿತ ರಾಮನ ದಿವ್ಯ ಸಂದೇಶ ನೀಡಲಿದ್ದಾರೆ. ಪ್ರತಿದಿನ ಸಂಜೆ 6ಗಂಟೆಗೆ ಧರ್ಮಸಭೆ, ಸಂಜೆ 7.30ರಿಂದ ಪ್ರಸಿದ್ಧ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಯುವ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ, ಖ್ಯಾತ ಡ್ರಮ್ಸ್ ವಾದಕ ಶಿವಮಣಿ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಜಗದೀಶ ಪುತ್ತೂರು ಬಳಗದವರ ಭಕ್ತಿ ಸಂಗೀತ, ಡಾ. ಎಲ್. ಸುಬ್ರಹ್ಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರಿಂದ ಶಾಸ್ತ್ರೀಯ ಸಂಗೀತ ವಯಲಿನ್ ವಾದನ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ಎಂ‌. ರಘುರಾಮಾಚಾರ್ಯರು, ಸಿಇಒ ಸುಬ್ರಹ್ಮಣ್ಯ ಭಟ್ , ಸಮತಿಯ ಪ್ರಮುಖ ಪದಾಧಿಕಾರಿಗಳಾದ ಸಗ್ರಿ ಅನಂತ ಸಾಮಗ, ಡಾ ಸಗ್ರಿ ಆನಂದತೀರ್ಥಾಚಾರ್ಯ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ , ಕೆ ರಾಮಚಂದ್ರ ಉಪಾಧ್ಯಾಯ , ಪೆರಣಂಕಿಲ ಶ್ರೀಶ ನಾಯಕ್ , ಪೆರಣಂಕಿಲ ದೇವಸ್ಥಾನದ ಮುಖ್ಯ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಆಚಾರ್ಯ , ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.