ಉಡುಪಿ: ನಾನೀಗ ಭಾರವಾದ ಹೃದಯದಿಂದ ಬ್ಯಾಡ್ಮಿಂಟನ್ ಆಟ ತೊರೆದಿದ್ದೇನೆ. ದೈಹಿಕ ಕ್ಷಮತೆಯ ಕಾರಣಕ್ಕೆ ಇದು ಅನಿವಾರ್ಯವಾಗಿತ್ತು. ಆಟವಾಡುವ ಉತ್ಸಾಹ ಇದ್ದರೂ, ದೇಹ ಸ್ಪಂದಿಸುವುದಿಲ್ಲ, ಕೋಚಿಂಗ್ ನೀಡುವ ಬಗ್ಗೆ ನನಗೆ ಆಸಕ್ತಿ ಇಲ್ಲ. ಹೈದರಾಬಾದ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿ ಇದೆ ಎಂದು ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹೇಳಿಕೆ ನೀಡಿದರು.

ನನ್ನ ಪತಿ ಕೂಡ ಗೋಪಿ ಸರ್ ಗೆ ( ಪುಲೇಲ ಗೋಪಿಚಂದ್) ಈಗ ಸಹಾಯ ಮಾಡುತ್ತಿದ್ದಾರೆ. ಕೋಚಿಂಗ್ ತುಂಬಾ ಡಿಫಿಕಲ್ಟ್, ಆಡುವುದಕ್ಕಿಂತಲೂ ಕೋಚಿಂಗ್ ಗೆ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತೆ, ಹತ್ತು ಹದಿನೈದು ಗಂಟೆ ನಿಂತುಕೊಂಡು ಬೊಬ್ಬೆ ಹೊಡೆಯುತ್ತಾ ತರಬೇತಿ ನೀಡುವುದು ಸುಲಭವಲ್ಲ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ.

ಬ್ಯಾಡ್ಮಿಂಟನ್ ಮಾತ್ರವಲ್ಲ ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಅಗತ್ಯ ಎನಿಸಿದರೆ ಮಾತ್ರ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳುವೆ, ಸದ್ಯ ಮಕ್ಕಳನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷ ಇದೆ. ಗೋಪಿ ಸರ್ ನನ್ನ ಪತಿ ಕಶ್ಯಪ್ ತುಂಬಾ ಆಕ್ಟಿವ್ ಆಗಿದ್ದಾರೆ.

ಆಟಗಾರ್ತಿಯ ಮನಸ್ಥಿತಿಯಿಂದ ನಾನು ಇನ್ನಷ್ಟೇ ಹೊರಗೆ ಬರಬೇಕು. ಈಗಷ್ಟೇ ನಾನು ಸಕ್ರಿಯ ಚಟುವಟಿಕೆಯಿಂದ ಹೊರ ಬಂದ ಆಟಗಾರ್ತಿ. ಸಾಮಾಜಿಕ ಜಾಲತಾಣ ಬಿಟ್ಟು ಮಕ್ಕಳು ಮೈದಾನದತ್ತ ಬರಬೇಕು. ಹಾಗಾಗಿ ಅವರನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷವಿದೆ ಎಂದರು.