ಉಡುಪಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ ಕರಾವಳಿ ಭಾಗದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲವೇ. ಹೀಗೆ ಒಂದುಪ್ರಶ್ನೆ ಕರಾವಳಿ ಭಾಗದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಯೋಜನೆಯ ತಾಂತ್ರಿಕ ಸಮಸ್ಯೆಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಗಂಗೊಳ್ಳಿಯಲ್ಲಿ ಬೋಟ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಯುಷ್ಮಾನ್ ಭಾರತ್ ಕಾರ್ಡ್ ಪರಿಶೀಲನೆ ವೇಳೆ ಒಟಿಪಿ ಲಭ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗೆ ತಕ್ಷಣ ಚಿಕಿತ್ಸೆ ದೊರೆಯದೆ, ಮಧ್ಯರಾತ್ರಿಯಲ್ಲಿ ಪತ್ನಿ ಅಸಹಾಯಕ ಸ್ಥಿತಿಯಲ್ಲಿ ಪತಿಯನ್ನು ಮನೆಗೆ ಮರಳಿ ಕರೆತರುವ ಪರಿಸ್ಥಿತಿ ಎದುರಾಯಿತು ಎನ್ನಲಾಗಿದೆ.
ಈ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ತಕ್ಷಣ ಮಧ್ಯಪ್ರವೇಶಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ರೋಗಿಯನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ರೋಗಿ ಮಣಿಪಾಲ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿಶು ಶೆಟ್ಟಿ ಅಂಬಲಪಾಡಿ, ಬಡವರ ಚಿಕಿತ್ಸೆಗೆಂದೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಾಂತ್ರಿಕ ದೋಷಗಳಿಂದ ಜನರಿಗೆ ಸಕಾಲದಲ್ಲಿ ನೆರವಾಗುತ್ತಿಲ್ಲ. ಜೀವ ಉಳಿಸುವ ಸಂದರ್ಭದಲ್ಲೂ ಒಟಿಪಿ ನೆಪ ಹೇಳಿ ಚಿಕಿತ್ಸೆ ನಿರಾಕರಿಸುವುದು ಅತ್ಯಂತ ಅಮಾನವೀಯ ನಡೆ. ಇಂತಹ ವೈದ್ಯರು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕುಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀವ ಮತ್ತು ಸಾವಿನ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡುವುದು ವೈದ್ಯಕೀಯ ಕ್ಷೇತ್ರದ ಮೂಲ ಕರ್ತವ್ಯ. ಆಡಳಿತಾತ್ಮಕ ಅಥವಾ ತಾಂತ್ರಿಕ ಸಮಸ್ಯೆಗಳನ್ನು ನೆಪವನ್ನಾಗಿ ಮಾಡಿಕೊಂಡು ಚಿಕಿತ್ಸೆ ವಿಳಂಬ ಮಾಡುವುದು ಖಂಡನೀಯ.
ಈ ಪ್ರಕರಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಷ್ಕರಿಸಬೇಕು. ಜನರ ಜೀವದೊಂದಿಗೆ ಚೆಲ್ಲಾಟವಾಡುವ ಅಧಿಕಾರಿಗಳು ಹಾಗೂ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ತಂದಿರುವ ಒಂದು ಉತ್ತಮ ಯೋಜನೆ ಅನುಷ್ಠಾನ ವಿಚಾರವಾಗಿ ಅಧಿಕಾರಿಗಳು ದಿವ್ಯ ನಿರ್ಲಕ್ಷ ತೋರುತ್ತಿರುವುದು ಸ್ಪಷ್ಟವಾಗಿದೆ. ಬಡ ಮತ್ತು ಮಧ್ಯಮ ಕುಟುಂಬದವರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎನ್ನುವ ಉದ್ದೇಶಕ್ಕೆ ಪ್ರಾರಂಭವಾದ ಯೋಜನೆ ಈ ರೀತಿ ಅಧಿಕಾರಿಗಳ ಅಸಡ್ಡೆಗೆ ಬಲಿಯಾಗುತ್ತಿರುವುದು ಶೋಚನೀಯ.

