ಉಡುಪಿ: ಈ ವರ್ಷದ ಉಡುಪಿ ಹಬ್ಬ/ ಉತ್ಸವ ಈಗಾಗಲೇ ಪ್ರಾರಂಭಗೊಂಡಿದ್ದು ಉಡುಪಿ ಜನತೆಯ ಮನಸೂರೆಗೊಳ್ಳುತ್ತಿದೆ. ನಗರದ ಬೀಡಿನಗುಡ್ಡೆ ರಂಗಮಂದಿರದ ವಿಶಾಲ ಜಾಗದಲ್ಲಿ ಉಡುಪಿ ಹಬ್ಬ ನಡೆಯುತ್ತಿದೆ. ಸಂಜೆಯಿಂದ ರಾತ್ರಿ ತನಕ ಜನರಿಗೆ ಭರಪೂರ ಮನರಂಜನೆ ನೀಡುತ್ತಿದೆ.

ಅವತಾರ್ ಮೂವಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸದ್ದು ಮಾಡಿದ ಚಿತ್ರ.ಆ ಚಿತ್ರದಲ್ಲಿ ಬಳಸಿದ ಗ್ರಾಫಿಕ್ಸ್, ಕಲಾತ್ಮಕ ಅಂಶಗಳು ಸಿನಿ ರಸಿಕರ ಮನಸ್ಸನ್ನು ಗೆದ್ದಿತ್ತು.ಇದೇ ಥೀಮ್ ನ್ನು ಇಟ್ಟುಕೊಂಡು ಉಡುಪಿ ಹಬ್ಬದಲ್ಲೂ ಅವತಾರ್ ನ ಥೀಮ್ ಪಾರ್ಕ್ ವೊಂದನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಉಡುಪಿ ಹಬ್ಬದಲ್ಲಿ ಇದನ್ನು ನಿರ್ಮಿಸಲಾಗಿದ್ದು ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಕೇರಳದ ಕಲಾವಿದರು ಸುಮಾರು ಒಂದೂವರೆ ತಿಂಗಳುಗಳ ಕಾಲ ಈ ಸೆಟ್ ನ್ನು ಉಡುಪಿ ಹಬ್ಬದಲ್ಲಿ ಹಾಕಿದ್ದಾರೆ.ಪ್ರವೇಶದ್ವಾರದಿಂದ ನೇರವಾಗಿ ಅವತಾರ್ ಪ್ರಪಂಚಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.ಅಭೂತಪೂರ್ವ ಬೆಳಕು ಮತ್ತು ವರ್ಣಗಳ ಸಂಯೋಜನೆಯಲ್ಲಿ ಇದು ಮೂಡಿಬಂದಿದ್ದು ನಿಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತದೆ.ಹಿರಿಯರು ಮಾತ್ರವಲ್ಲದೆ ಪುಟ್ಟ ಮಕ್ಕಳಿಗೂ ಇದೊಂದು ಅಪೂರ್ವ ಅನುಭವವನ್ನು ನೀಡುತ್ತದೆ.

ಇದಕ್ಕೆ ಪ್ರತ್ಯೇಕ ಟಿಕೆಟ್ ಕೂಡ ಇಲ್ಲ.ಎಂಟ್ರಿ ಫೀಸ್ ನಲ್ಲೇ ಉಚಿತವಾಗಿ ಇದನ್ನು ವೀಕ್ಷಿಸಿ ಖುಷಿಪಡಬಹುದಾಗಿದೆ.ಅಲ್ಲಿಂದ ಮುಂದೆ ವಸ್ತುಪ್ರದರ್ಶನಗಳು ,ಮಳಿಗೆಗಳು,ಆಟಿಕೆಗಳ ಮಳಿಗೆಗಳು, ಬಗೆಬಗೆಯ ಮನರಂಜನೆ ಕ್ರೀಡೆಗಳು ಉಡುಪಿ ಹಬ್ಬದ ಸಭ್ರಮವನ್ನು ಹೆಚ್ಚಿಸುತ್ತದೆ.

ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರತ್ಯೇಕ ಮನರಂಜನಾ ಆಟಗಳು ,ಮಕ್ಕಳಿಗೆ ಜಲಕ್ರೀಡೆಯಾಟ. ಇವೆಲ್ಲದರ ಜೊತೆಗೆ ಬಗೆಬಗೆಯ ತಿಂಡಿ ತಿನಿಸುಗಳ ಅಂಗಡಿಗಳು ಜನರ ಹೊಟ್ಟೆ ಮತ್ತು ಮನಸ್ಸು ಎರಡನ್ನೂ ತಣಿಸುತ್ತಿದೆ. ನೀವಿನ್ನೂ ಉಡುಪಿ ಹಬ್ಬಕ್ಕೆ ಹೋಗಿಲ್ಲ ಎಂದಾದರೆ ಇಂದೇ ಭೇಟಿ ನೀಡಿ.ವಿಶಾಲವಾದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ.