ಉಡುಪಿ: ನಾಲ್ಕು ವರ್ಷಗಳ ಹಿಂದೆ ಮಂಚಿಕುಮೇರಿಯಲ್ಲಿ ನಡೆದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬೆಳ್ತಂಗಡಿ ನಿವಾಸಿ ಮಿಥುನ್ ಹಾಗೂ ನಾಗೇಶ್ ಪೂಜಾರಿ ಶಿಕ್ಷೆಗೆ ಗುರಿಯಾದ ಆರೋಪಿಗಳು.

ಘಟನೆ ವಿವರ:
2022ರ ಫೆಬ್ರವರಿ 18ರಂದು ಮಂಚಿಕುಮೇರಿ ನಿವಾಸಿ ರಮಾನಾಥ ರೈ ಅವರ ಪತ್ನಿ ಸುಮತಿ ಮನೆಯಲ್ಲಿ ಒಬ್ಬರೇ ಇದ್ದಾಗ ಅವರ ಅಕ್ಕನ ಮಗ ಮಿಥುನ್ ಹಾಗೂ ಅವನ ಸ್ನೇಹಿತ ನಾಗೇಶ್ ಮನೆಗೆ ಬಂದು ಬೆಲ್ ಮಾಡಿದರು. ಪರಿಚಿತರಾದ ಕಾರಣ ಸುಮತಿ ಬಾಗಿಲು ತೆರೆದಿದ್ದು, ಒಳಗೆ ಪ್ರವೇಶಿಸಿದ ಇಬ್ಬರೂ ಸೇರಿ ಅವರನ್ನು ಗಟ್ಟಿಯಾಗಿ ಹಿಡಿದು ಕುತ್ತಿಗೆ ಹಿಸುಕಿದರು. ಇದರಿಂದ ಸುಮತಿ ಪ್ರಜ್ಞೆ ತಪ್ಪಿದರು.

ಆ ಬಳಿಕ ಆರೋಪಿಗಳು ಅವರನ್ನು ಚೀಲದಲ್ಲಿ ಹಾಕಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಸಾಗಿಸಲು ಯತ್ನಿಸುತ್ತಿದ್ದ ವೇಳೆ ರಮಾನಾಥ ರೈ ಹಾಗೂ ಅಕ್ಕಪಕ್ಕದವರು ಮನೆಗೆ ಬಂದು ಬಾಗಿಲು ತಟ್ಟಿದರು. ಈ ವೇಳೆ ಆರೋಪಿಗಳು ಬಾಗಿಲು ತೆರೆದು ಹೊರಗೆ ಓಡಲು ಯತ್ನಿಸಿದಾಗ ಸಾರ್ವಜನಿಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ನಂತರ ಸೂಟ್‌ಕೇಸ್ ತೆರೆದು ನೋಡಿದಾಗ ಅದರೊಳಗೆ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದು ವಾರದ ಬಳಿಕ ಅವರು ಚೇತರಿಸಿಕೊಂಡಿದ್ದರು.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹20,000 ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದರು.

View this post on Instagram

A post shared by News Karnataka (@newskarnataka)