ಉಡುಪಿ: ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಕರ್ಮರಕಟ್ಟೆ ಪಡೀಲುಬೆಟ್ಟುವಿನಲ್ಲಿ ದನ ಕಡಿದು ಅಕ್ರಮವಾಗಿ ಮಾಂಸ ಸಾಗಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಪೊಲೀಸ್ ದಾಳಿ ನಡೆದಿದೆ.
ಈ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ನ. 11ರ ಬೆಳ್ಳಂಬೆಳಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪಡೀಲುಬೆಟ್ಟುವಿಗೆ ತೆರಳಿ, ಅಶ್ರಫ್ ಎಂಬಾತನಿಗೆ ಸೇರಿದ ತೋಟದಲ್ಲಿ ದನ ಕಡಿದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ.

ತಕ್ಷಣವೇ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್. ಹಾಗೂ ಅವರ ತಂಡ ಸ್ಥಳಕ್ಕೆ ಧಾವಿಸಿದ್ದು ಈ ವೇಳೆ ಮಾಂಸ ತುಂಬಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆರೋಪಿಗಳಾದ ಅಶ್ರಫ್, ನವಾಜ್, ಅಪ್ತಾಬ್ (ಅಪ್ಪು) ಪರಾರಿಯಾಗಿರುತ್ತಾರೆ.

ಬಳಿಕ ಮನೆ ಪರಿಶೀಲನೆ ಮಾಡುವ ಸಂದರ್ಭ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 60 ಕೆ.ಜಿ.ಯಷ್ಟು ದನದ ಮಾಂಸ ಪತ್ತೆಯಾಗಿದೆ. ವಧೆಗೆಂದು ತಂದಿದ್ದ ಮತ್ತೊಂದು ದನ ತೋಟದಲ್ಲಿ ಪತ್ತೆಯಾಗಿದೆ.

