ಉಡುಪಿ: ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಸಂತೋಷ್ ನಾಯಕ್ (45) ಮತ್ತು ದೇವರಾಜ್ ಸುಂದರ್ ಮೆಂಡನ್ (46) ಬಂಧಿತರು. ಉಳಿದ ಆರೋಪಿಗಳಿಗಾಗಿ ಉಡುಪಿ ಪೊಲೀಸ್​ರು ಶೋಧ ಮುಂದುವರಿಸಿದ್ದಾರೆ. ಜುಲೈ 25ರಂದು ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರು ಎಂಬಲ್ಲಿ ಕವಿತಾ ಎಂಬುವವರ ಮನೆಯಲ್ಲಿ ಘಟನೆ ನಡೆದಿತ್ತು.

15 ದಿನಗಳ ಹಿಂದೆ ಕೃತ್ಯಕ್ಕೆ ಬಳಸಿರುವ ಇನ್ನೋವಾ ಕಾರನ್ನು ಪೊಲೀಸ್​ರು ವಶಕ್ಕೆ ಪಡೆದಿದ್ದು, ಉಡುಪಿ ನ್ಯಾಯಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಹಾರಾಷ್ಟದಿಂದ ಸಂಚು ರೂಪಿಸಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಕೃತ್ಯ ನಡೆಸಲು ಖದೀಮರು ಯೋಜನೆ ಹಾಕಿದ್ದರು.

ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ಲೈವ್ ಸರ್ವೇಲೆನ್ಸ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಎಚ್ಚರಿಕೆಯ ಹಿನ್ನಲೆ ಕವಿತಾ ಮನೆಯ ಬಾಗಿಲು ಭದ್ರಪಡಿಸಿ ಒಳಗೆ ಕುಳಿತಿದ್ದರು. ಮನೆಯ ಒಳಗೆ ಪ್ರವೇಶಿಸಲು ಯತ್ನ ನಡೆಸಿ ವಿಫಲರಾಗಿ ವಾಪಾಸ್ ಆಗಿದ್ದರು. ಘಟನೆ ಬಳಿಕ ಕವಿತಾ ದೂರಿನ ಮೇಲೆ ತನಿಖೆ ನಡೆಸಿದ್ದ ಉಡುಪಿ ಪೊಲೀಸ್​, ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿ ಅಪರಾಧಿಗಳ ಶೋಧ ಮಾಡಿ ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

ಕುಂದಾಪುರ ಮೂಲದ ಸೈನ್ ಇನ್ ಸಿ ಸಿ ಕ್ಯಾಮೆರಾ ಲೈವ್ ಸರ್ವೆಲೆನ್ಸ್ ಸಂಸ್ಥೆ ಕವಿತಾ ಅವರ ಮನೆ ಮುಂದೆ 8:30 ರ ಸುಮಾರಿಗೆ ಅಪರಿಚಿತರು ಎರಡು ಕಾರಿನಲ್ಲಿ ಬಂದಿರುವುದನ್ನು ಗಮನಿಸಿ ಸಕಾಲದಲ್ಲಿ ಎಚ್ಚರಿಸಿದ್ದರು. ಮನೆಯೊಡತಿ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಮನೆಯ ಪಕ್ಕದ ಗೇಟ್ ಹತ್ತಿ ಕಾಂಪೌಂಡ್ ಒಳಗೆ ಹಾರಿ ಬಂದ ತಂಡದವರು ಮನೆಯ ಸುತ್ತ ವೀಕ್ಷಿಸಿ ಮನೆಯ ಒಳ ಪ್ರವೇಶಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಸಕಾಲದಲ್ಲಿ ಸಿಸಿ ಕ್ಯಾಮೆರಾ ಸಂಸ್ಥೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಮನೆಯೊಡತಿ ಬಾಗಿಲನ್ನು ಭದ್ರಪಡಿಸಿಕೊಂಡ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತ ತಪ್ಪಿತ್ತು. ಈ ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.