ಉಡುಪಿ: ಬನ್ನಂಜೆಯ ಇತಿಹಾಸ-ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ಸಂಜೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಜೋಡುಕಟ್ಟೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಪಿ. ವಾಸುದೇವ ಉಪಾಧ್ಯ ಅವರು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಈಡುಗಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆಯೂ ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ನಿಲ್ದಾಣ, ಶಿರಬೀಡು ಮಾರ್ಗವಾಗಿ ಸಾಗಿಬಂದು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿತು. ಈ ಬೃಹತ್ ಹೊರೆಕಾಣಿಕೆ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ವಾಹನಗಳಲ್ಲಿ ಉಡುಪಿ ಮತ್ತು ಸುತ್ತಮುತ್ತಲಿನ ಊರುಗಳ ಭಕ್ತಾಭಿಮಾನಿಗಳು ಹಸಿರು ತರಕಾರಿ, ಫಲವಸ್ತು, ಧವಸ ಧಾನ್ಯ, ಅಕ್ಕಿ, ಬೆಲ್ಲ ತುಪ್ಪ, ತೆಂಗಿನಕಾಯಿ ಇತ್ಯಾದಿಗಳನ್ನು ದೇವಾಲಯಕ್ಕೆ ತಂದೊಪ್ಪಿಸಿದರು. ಹುಲಿ ಕುಣಿತ, ವಿವಿಧ ಭಜನಾ ತಂಡಗಳು, ಆಕರ್ಷಕ ಟ್ಯಾಬ್ಲೊಗಳು, ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಮಾಧವ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಬನ್ನಂಜೆ ಸುರೇಶ್ ಶೆಟ್ಟಿ, ತೋಟದಮನೆ ದಿವಾಕರ ಶೆಟ್ಟಿ, ಪಿ. ಪುರುಷೋತ್ತಮ ಶೆಟ್ಟಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಮಿತಾ ಎಸ್. ಭಂಡಾರಿ, ಎಂ. ಪ್ರಭಾಕರ ಶೆಟ್ಟಿ, ಶೇಖರ ಶೆಟ್ಟಿ, ಸುದೇಶ್ ಶೇಟ್ ಇದ್ದರು.

