ಉಡುಪಿ: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಮೈಸೂರು ಇದರ ಸಹಯೋಗದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳವನ್ನು ಮಾ. 17ರಂದು ನಗರದ ಅಮೃತ್ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ ಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ 1200 ಮಂದಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಸುಮಾರು 100ಕ್ಕಿಂತಲೂ ಅಧಿಕ ಕಂಪೆನಿಗಳು ಭಾಗವಹಿಸಲಿವೆ ಎಂದರು.
ಅಂದು ಬೆಳಿಗ್ಗೆ 9.30ಕ್ಕೆ ಮೂಡಬಿದಿರೆ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜೆ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಳಿಕ ಉದ್ಯೋಗ ಮತ್ತು ಅಪ್ರೆಂಟಿಶಿಪ್ ಮೇಳ ನಡೆಯಲಿದೆ. ಉದ್ಯೋಗ ನೇಮಕಾತಿ ಪತ್ರ ವಿತರಣೆ ವ್ಯವಸ್ಥೆ ಮಾಡಲು ಕೆಲವು ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು. ಇಲಾಖೆಯ ಅಧಿಕಾರಿಗಳು ಆಗಮಿಸಿ ಇದರ ವ್ಯವಸ್ಥೆ ಪರಿಶೀಲನೆ ಮಾಡಲಿದ್ದಾರೆ. ಅಪ್ರೆಂಟಿಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಗೆ ಉತ್ತಮ ಗೌರವಧನ ಇರುತ್ತದೆ. ಕೇಂದ್ರ ಸರಕಾರದಿಂದ ಪ್ರತಿ ಅಭ್ಯರ್ಥಿಗೆ ನಿರ್ದಿಷ್ಟ ಅನುದಾನವನ್ನು ನೇರವಾಗಿ ಸಂಸ್ಥೆಗೆ ನೀಡಲಾಗುತ್ತದೆ. ಒಮ್ಮೆ ಸಂಸ್ಥೆಯ ಒಳಗೆ ಹೋದ ಅಭ್ಯರ್ಥಿ ಅಲ್ಲಿಯೇ ಶಾಶ್ವತ ಉದ್ಯೋಗ ಪಡೆಯುವ ಅವಕಾಶವೂ ಹೆಚ್ಚಿರುತ್ತದೆ ಎಂದರು.
ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹೊರದೇಶಗಳಲ್ಲಿ ಉದ್ಯೋಗಕ್ಕೆ ಪ್ರಮಾಣಪತ್ರ ಜತೆಗೆ ಕೌಶಲತೆ ಕೇಳುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಸಹಕಾರಿಯಾಗಲಿದೆ. ಅಪ್ರೆಂಟಿಶಿಪ್ ಮಾಡಿದವರಿಗೆ ಒಂದು ವರ್ಷ ತರಬೇತಿ ಜತೆಗೆ ಸ್ಟೈಫಂಡ್ ಸಿಗುತ್ತದೆ. ಈ ಮೇಳವು ಯುವ ಜನತೆಗೆ ಹೆಚ್ಚು ಅನುಕೂಲವಾಗಲಿದೆ. ಈ ಬಾರಿ 2,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಓಬು ಪೂಜಾರಿ, ಗಣನಾಥ ಎಕ್ಕಾರ್, ಪ್ರವೀಣ್ ಎಂ. ಪೂಜಾರಿ, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ನಾರಾಯಣ ಇದ್ದರು.

