ಉಡುಪಿ: ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಜೂಜಾಟ ನಡೆಯುತ್ತಿರುವ ಕುರಿತು ದೊರೆತ ಮಾಹಿತಿಯ ಮೇರೆಗೆ ಕಾರ್ಕಳ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಚಪ್ಪರ ಹಾಗೂ ಟಾರ್ಪಾಲ್ ಅಡಿ ಟೇಬಲ್ ಸುತ್ತ ಕುಳಿತು ಹಣ ಪಣಕ್ಕೊಡ್ಡಿ ‘ಅಂದ‌ರ್-ಬಾಹರ್’ ಜೂಜಾಟ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ದಾಳಿಯಲ್ಲಿ ವಿಜೇಶ್ ಕುಮಾರ್ (40), ದಸ್ತಗೀರ್ (33) ಹಾಗೂ ರೋಹಿತ್ (34) ಅವರನ್ನು ಸ್ಥಳದಲ್ಲೇ ಬಂಧಿಸಲಾಯಿತು. ಜೂಜಾಟಕ್ಕೆ ಬಳಸಿದ್ದ ₹23,970 ನಗದು, ₹35 ಸಾವಿರ ಮೌಲ್ಯದ ಐದು ಮೊಬೈಲ್ ಫೋನ್‌ಗಳು, ಇಸ್ಪೀಟ್ ಕಾರ್ಡ್‌ಗಳು, ಟೇಬಲ್, ಕುರ್ಚಿಗಳು, ಬ್ಯಾಟರಿ ಹಾಗೂ ವಿದ್ಯುತ್ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಜೂಜಾಟಕ್ಕೆ ಆಗಮಿಸಲು ಬಳಸಿದ್ದ ಮೂರು ಕಾರುಗಳು, ಎರಡು ಮೋಟಾರ್‌ಸೈಕಲ್‌ಗಳು ಹಾಗೂ ಒಂದು ಸ್ಕೂಟರ್‌ನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹13.07 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ದಾಳಿ ವೇಳೆ ಪರಾರಿಯಾಗಿದ್ದ ವಿಜಯ (39), ಮಹೇಶ್ (26), ಕಿಶೋರ್ ಕುಮಾರ್ (46) ಹಾಗೂ ಸಂತೋಷ್ ಆಚಾರ್ಯ (35) ಅವರನ್ನು ಬಳಿಕ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

View this post on Instagram

A post shared by News Karnataka (@newskarnataka)