ಉಡುಪಿ : ನಗರದ ಹೃದಯ ಭಾಗದಲ್ಲೇ ವರ್ಷಗಳಿಂದ ತೆರೆದಿರುವ ಬೃಹತ್ ಗಾತ್ರದ ಗುಂಡಿಯೊಂದು ಇದೀಗ ಮತ್ತೊಮ್ಮೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ತೋಡಲಾಗಿದ್ದ ಈ ಪ್ರದೇಶ ಮಳೆಗಾಲದಲ್ಲಿ ನೀರು ತುಂಬಿ ಅಪಾಯದ ಕೆರೆಯಾಗಿ ಮಾರ್ಪಡುತ್ತಿದೆ. ಸುತ್ತಮುತ್ತಲಿನ ಕಟ್ಟಡಗಳಿಗೆ ಕುಸಿತದ ಭೀತಿ ಎದುರಾಗಿದ್ದು, ಡೆಂಗ್ಯೂ-ಮಲೇರಿಯಾ ಹರಡುವ ಆತಂಕವೂ ಹೆಚ್ಚಾಗಿದೆ. ಕೃಷ್ಣಮಠಕ್ಕೆ ಸಾಗುವ ಪ್ರಮುಖ ರಸ್ತೆಯ ಪಕ್ಕದಲ್ಲೇ ಇರುವ ಈ ಗುಂಡಿಯನ್ನು ಕೂಡಲೇ ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಉಡುಪಿ ನಗರದ ಹೃದಯ ಭಾಗದಲ್ಲೇ ಇರುವ ಈ ಬೃಹತ್ ಗಾತ್ರದ ಗುಂಡಿ ಇದೀಗ ನಾಗರಿಕರಿಗೆ ನಿದ್ದೆ ಕದಿಯುವಂತಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ವರ್ಷಗಳ ಹಿಂದೆ ತೋಡಲಾಗಿದ್ದ ಈ ಜಾಗ ಇದೀಗ ಅಪಾಯದ ಕೇಂದ್ರವಾಗಿಯೇ ಉಳಿದಿದೆ.ಉದ್ಯಮಿ ಬಿ.ಆರ್. ಶೆಟ್ಟಿಗೆ ಉಚಿತ ಹೆರಿಗೆ ಆಸ್ಪತ್ರೆ ನಡೆಸುವ ಷರತ್ತಿನಡಿ ಸರ್ಕಾರ ಈ ಭೂಮಿಯನ್ನು ಮಂಜೂರು ಮಾಡಿತ್ತು.
ಆರಂಭದಲ್ಲಿ ಸರ್ಕಾರಿ ಆಸ್ಪತ್ರೆಯ ನಿರ್ವಹಣೆಯನ್ನೂ ಉದ್ಯಮಿಯೇ ವಹಿಸಿಕೊಂಡಿದ್ದರು. ಆದರೆ ನಂತರ ಉಂಟಾದ ಆರ್ಥಿಕ ನಷ್ಟದ ಹಿನ್ನೆಲೆ ಆಸ್ಪತ್ರೆ ಕಾರ್ಯ ಸ್ಥಗಿತಗೊಂಡಿತು.ಆಸ್ಪತ್ರೆ ನಿರ್ಮಾಣ ಕಾಮಗಾರಿ ಮಧ್ಯದಲ್ಲೇ ನಿಂತುಹೋಗಿದ್ದು, ತೋಡಲಾಗಿದ್ದ ಬೃಹತ್ ಗುಂಡಿ ಹಾಗೆಯೇ ಉಳಿದುಬಿಟ್ಟಿದೆ. ಹಾಕಿದ್ದ ಪಿಲ್ಲರ್‌ಗಳು ಈಗಲೂ ಅದೇ ಸ್ಥಿತಿಯಲ್ಲಿ ನಿಂತಿವೆ. ಮಳೆಗಾಲ ಆರಂಭವಾದರೆ ಈ ಪ್ರದೇಶ ಸಂಪೂರ್ಣ ನೀರಿನಿಂದ ತುಂಬಿ ಈಜುಕೊಳದಂತಾಗುತ್ತದೆ.
ಗುಂಡಿಯ ಸುತ್ತಮುತ್ತ ಬಹುಮಹಡಿ ಕಟ್ಟಡಗಳು ಇರುವುದರಿಂದ ಮಣ್ಣು ಕುಸಿಯುವ ಭೀತಿ ಹೆಚ್ಚಾಗಿದೆ. ಈಗಾಗಲೇ ಕೆಲವು ಭಾಗಗಳಲ್ಲಿ ಮಣ್ಣು ಜಾರುತ್ತಿರುವ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.ಇದು ಕೇವಲ ಕಟ್ಟಡಗಳಿಗೆ ಮಾತ್ರವಲ್ಲ, ಸಾರ್ವಜನಿಕರ ಜೀವಕ್ಕೂ ಅಪಾಯಕಾರಿಯಾಗಿದೆ. ಪ್ರಮುಖ ರಸ್ತೆಯ ಮಗ್ಗುಲಲ್ಲೇ ಇರುವ ಈ ಗುಂಡಿಗೆ ದಾರಿ ತಪ್ಪಿ ಯಾರಾದರೂ ಬಿದ್ದರೆ ಪ್ರಾಣಾಪಾಯ ಖಚಿತ ಎಂಬ ಭೀತಿ ವ್ಯಕ್ತವಾಗುತ್ತಿದೆ. ಮಕ್ಕಳನ್ನೇ ಹೊರಗೆ ಬಿಡಲು ಹೆದರುತ್ತಿದ್ದೇವೆ. ಕೂಡಲೇ ಈ ಗುಂಡಿ ಮುಚ್ಚಬೇಕು.
ಉಡುಪಿ ನಗರಸಭೆ ಮುಂಭಾಗದಲ್ಲೇ, ಕೃಷ್ಣಮಠಕ್ಕೆ ಸಾಗುವ ಪ್ರಮುಖ ಮಾರ್ಗದ ಪಕ್ಕದಲ್ಲೇ ಇರುವ ಈ ಅಪಾಯಕಾರಿ ಗುಂಡಿ ಈಗ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಸಂಕೇತವಾಗಿ ಪರಿಣಮಿಸಿದೆ. ಮಳೆಗಾಲ ತೀವ್ರಗೊಳ್ಳುವ ಮುನ್ನವೇ ಈ ಅಪಾಯದ ಗುಂಡಿಯನ್ನು ಮುಚ್ಚುವ ಕೆಲಸ ಆರಂಭವಾಗುತ್ತದೆಯೇ..? ಅಥವಾ ದೊಡ್ಡ ಅನಾಹುತವಾದ ಬಳಿಕವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ.

