ಉಡುಪಿ: ಉಡುಪಿಯಲ್ಲೊಂದು ಜಲ ವಿಸ್ಮಯ ಕಂಡು ಬರುತ್ತಿದೆ. ಕಡು ಬೇಸಿಗೆಗೆ ಎಲ್ಲಾ ಕಡೆ ನೀರು ಬತ್ತಿ ಹೋದರೂ ಇಲ್ಲೊಂದು ಕೆರೆಯಲ್ಲಿ ತುಂಬಾ ಸ್ಪಟಿಕದಷ್ಟು ಶುದ್ದವಾದ ನೀರು ತುಂಬಿದೆ. ವರ್ಷದ 365 ದಿನವೂ ಈ ಕೆರೆಗೆ ಅಂತರ್ಜಲ ಹರಿದು ಬರುತ್ತಿದೆ. ತೆರೆದಿಟ್ಟ ನಳ್ಳಿಯಿಂದ ಸುರಿದಂತೆ ಈ ಕೆರೆಗೆ ನೀರು ಹರಿಯುತ್ತಿದೆ.
ಹೌದು, ಉಡುಪಿಯ ಕೀಳಿಂಜೆ ಗ್ರಾಮದಲ್ಲಿದೆ ಈ ವಿಸ್ಮಯಕಾರಿ ಪುಷ್ಕರಣಿ. ಇದು ಹರಿಹರ ಸನ್ನಿಧಾನದ ಅಪರೂಪದ ಕ್ಷೇತ್ರ ಕೂಡ ಹೌದು. ಪ್ರಕೃತಿಯ ಮಡಿಲಲ್ಲಿರುವ ಈ ಪುರಾತನ ದೇಗುಲದಲ್ಲಿ ಶತಮಾನಗಳಿಂದ ನೀರಿನ ಒರತೆ ನಿಂತಿಲ್ಲ. ದೇಗುಲದ ಆವರಣದಲ್ಲಿರುವ ಈ ವಿಸ್ಮಯಕಾರಿ ಪುಷ್ಕರಣಿಯಲ್ಲಿ ಕಡು ಬೇಸಿಗೆಯಲ್ಲೂ ನೀರು ತುಂಬಿರುತ್ತದೆ. ಅಲ್ಲದೆ, ನೀರು ಸ್ಪಟಿಕದಷ್ಟು ಶುದ್ಧವಾಗಿದೆ.
ಕಾಡಿನ ಮಧ್ಯೆ ಈ ಪುರತಾನ ದೇಗುಲವಿದ್ದು, ಎತ್ತರ ಪ್ರದೇಶದಲ್ಲಿ ನೂರಾರು ಮರಗಳಿವೆ. ಮರಗಳು ಹಿಡಿದಿಟ್ಟ ನೀರು, ಪುಷ್ಕರಣಿಗೆ ಹರಿದು ಬರುವ ದೃಶ್ಯ ರಮಣೀಯವಾಗಿದೆ. ತೆರೆದಿಟ್ಟ ನಳ್ಳಿಯಂತೆ ನಿರಂತರ ನೀರು ಸುರಿಯುತ್ತಿರುತ್ತದೆ.
ಉಡುಪಿಯಲ್ಲಿ ಈ ಬಾರಿ ಹಿಂದೆಂದೂ ಕಂಡಿರದಷ್ಟು ಸುಡುಬಿಸಿಲು ವಾತಾವರಣವಿದೆ. ಆದರೆ, ಸುಡು ಬಿಸಿಲಿನಲ್ಲೂ ಈ ಕೆರೆ ಬತ್ತಿಲ್ಲ. ಈ ಪುಷ್ಕರಣಿಗೆ ಅಂತರ್ಜಲ ಹರಿದು ಬರುತ್ತಲೇ ಇದೆ. ಹಗಲು ರಾತ್ರಿ ಎನ್ನದೆ ನೀರು ಸುರಿಯುತ್ತಿರುತ್ತದೆ. ಕಡು ಬೇಸಗೆಯಲ್ಲಿ ಈ ನೀರನ್ನು ಕಂಡು ಸಂತಸ ಪಡಬಹುದು.

